ಕೊಚ್ಚಿ: ಕಳಮಸ್ಸೇರಿಯಲ್ಲಿ ನ್ಯಾಯಾಂಗ ನಗರ ಸ್ಥಾಪನೆಗೆ ಒಪ್ಪಂದ ಮಾಡಲಾಗುವುದು. ಹೈಕೋರ್ಟ್ ಕೂಡ ಅದರ ಭಾಗವಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಶಿಶ್ ಜಿತೇಂದ್ರ ದೇಸಾಯಿ ಹಾಜರಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.
ಇದನ್ನು ಆಧರಿಸಿ ಇದೇ 17ರಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಸಚಿವರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ರಾಜೀವ್ ಮಾಹಿತಿ ನೀಡಿದರು. ಸದ್ಯ ಕಳಮಸ್ಸೇರಿಯಲ್ಲಿ ಲಭ್ಯವಿರುವ 27 ಎಕರೆ ಜತೆಗೆ ಹೆಚ್ಚಿನ ಜಮೀನು ಬೇಕಾದರೆ ಪಡೆಯುವ ಕ್ರಮ ಕೈಗೊಳ್ಳಲಾಗುವುದು.
ಕಳಮಸ್ಸೇರಿಯಲ್ಲಿ ಹೈಕೋರ್ಟ್ ಹೊರತಾಗಿ, ಆಧುನಿಕ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಮತ್ತು ನ್ಯಾಯಾಂಗ ಅಕಾಡೆಮಿ ಮತ್ತು ಮಧ್ಯಸ್ಥಿಕೆ ಕೇಂದ್ರದಂತಹ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು. 60 ನ್ಯಾಯಾಲಯಗಳನ್ನು ಹೊಂದಿರುವ ಹೈಕೋರ್ಟ್ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 28 ಲಕ್ಷ ಚ. ಅಡಿ ಪ್ರದೇಶ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯಗಳನ್ನು ಸಿದ್ಧಪಡಿಸಲಾಗುವುದು. ನ್ಯಾಯಾಧೀಶರ ಕಚೇರಿ, ಅಡ್ವೊಕೇಟ್ ಜನರಲ್ ಕಚೇರಿ, ಸಿಬ್ಬಂದಿ ವಸತಿ ಗೃಹಗಳು, ವಕೀಲರ ಚೇಂಬರ್, ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗುವುದು.
ಪ್ರಸ್ತುತ ಜಾಗ ಸೀಮಿತವಾಗಿರುವ ಪರಿಸ್ಥಿತಿಯಲ್ಲಿ ಹೊಸ ನಿರ್ಮಾಣಕ್ಕೆ ಹೈಕೋರ್ಟ್‍ನಿಂದ ನಿರ್ದೇಶನ ಬಂದಿತ್ತು.