ಡೆಸ್ಕ್‌ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಈಗಿನ ಅನಿವಾರ್ಯ ವ್ಯವಸ್ಥೆಗಳಲ್ಲೊಂದು. ಆದರೆ, ಕಂಪ್ಯೂಟರ್‌ನಲ್ಲಿ ಕೆಲಸ ಎಂದಾಕ್ಷಣ, ನಮಗೆ ಬೇಕಾದಾಗಲೋ, ನಿಧಾನವಾಗಿ ಕೀಬೋರ್ಡ್ ಅಥವಾ ಕೀಲಿಮಣೆಯಲ್ಲಿರುವ ಕೀಲಿಗಳನ್ನು ಹುಡುಕಿ, ಮೌಸ್ ಹಿಡಿದು ಸ್ಕ್ರಾಲ್ ಮಾಡುತ್ತಲೋ ಕೆಲಸ ಮಾಡುವುದು ಈ ವೇಗದ ಯುಗದಲ್ಲಂತೂ ಆಗದ ಮಾತು.
ಮೊದಲಾಗಿ, ಕೀಬೋರ್ಡ್‌ನಲ್ಲಿರುವ ಟ್ಯಾಬ್ (Tab), ಕಂಟ್ರೋಲ್ (Ctrl), ಶಿಫ್ಟ್ (Shift), ಆಲ್ಟ್ (Alt), ವಿಂಡೋಸ್ (Windows Logo) ಮತ್ತು ಸ್ಪೇಸ್ ಕೀಲಿಗಳು ಹಾಗೂ ಇಂಗ್ಲಿಷ್ ಕಾಗುಣಿತಾಕ್ಷರಗಳ ಕೀಲಿಗಳ ಸ್ಥಾನವನ್ನು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ಮುಂದಿನವನ್ನು ನೆನಪಿಟ್ಟುಕೊಂಡರೆ ಕೆಲಸಗಳೆಲ್ಲ ಫಟಾಫಟ್!
ಬಹುಶಃ ಇದು ಎಲ್ಲರಿಗೂ ತಿಳಿದಿದೆ. ತಿಳಿದಿಲ್ಲವಾದರೆ ತಿಳಿದುಕೊಂಡಿರಲೇಬೇಕು. ಒಂದು ಪುಟದಲ್ಲಿರುವ ಪಠ್ಯ, ಚಿತ್ರ, ವಿಡಿಯೊ ಮುಂತಾದ ಫೈಲ್‌ಗಳಲ್ಲಿ ಎಲ್ಲವನ್ನೂ ಏಕಕಾಲಕ್ಕೆ ಆಯ್ಕೆ ಮಾಡಲು, ಮೌಸ್‌ನ ಕರ್ಸರ್ ಇಟ್ಟ ಬಳಿಕ 'ಕಂಟ್ರೋಲ್' ಹಾಗೂ 'A' ಬಟನ್; ಆಯ್ಕೆ ಮಾಡಿದ ಅಕ್ಷರ ಅಥವಾ ಚಿತ್ರ ಅಥವಾ ಬೇರಾವುದೇ ಫೈಲನ್ನು ಕಾಪಿ ಮಾಡಲು ಕಂಟ್ರೋಲ್ ಮತ್ತು 'C' ಬಟನ್; ಅದನ್ನು ಬೇಕಾದಲ್ಲಿ ಪೇಸ್ಟ್ ಮಾಡಲು ಕಂಟ್ರೋಲ್ ಹಾಗೂ 'V' ಬಟನ್ ಏಕಕಾಲದಲ್ಲಿ ಒತ್ತಿದರಾಯಿತು. ಕಂಟ್ರೋಲ್ ಮೂಲಕ ನಿಭಾಯಿಸಬಹುದಾದ ಇನ್ನಷ್ಟು ಉಪಯುಕ್ತ ಅಂಶಗಳೆಂದರೆ, ತೆರೆದಿರುವ ಫೈಲ್ ಅಥವಾ ಪುಟವನ್ನು ಮುದ್ರಿಸಬೇಕಿದ್ದರೆ ಕಂಟ್ರೋಲ್ ಹಾಗೂ 'P', ಹೊಸ ಫೈಲ್/ಬ್ರೌಸರ್ ವಿಂಡೋ ತೆರೆಯಬೇಕಿದ್ದರೆ ಕಂಟ್ರೋಲ್ ಮತ್ತು 'N', ತೆರೆದಿರುವ ಬ್ರೌಸರ್ ಅಥವಾ ಫೈಲನ್ನು ಮುಚ್ಚಬೇಕಿದ್ದರೆ ಕಂಟ್ರೋಲ್ ಮತ್ತು 'W' ಬಳಸಿ. ಬೇಕೆಂದೇ ಅಥವಾ ಆಕಸ್ಮಿಕವಾಗಿ ಮುಚ್ಚಿದ ಬ್ರೌಸರ್ ಪುಟವನ್ನು ತಕ್ಷಣ ತೆರೆಯಬೇಕಿದ್ದರೆ ಕಂಟ್ರೋಲ್ ಶಿಫ್ಟ್ 'T' ಒತ್ತಿ.
ಇದು ಎಲ್ಲರೂ ಅಗತ್ಯ ಗಮನಿಸಬೇಕಾಗಿರುವುದು. ಏನೋ ಒಂದು ಜಾಲತಾಣವನ್ನೋ, ವಿಷಯದ ಕುರಿತ ಮಾಹಿತಿಯನ್ನೋ ನಾವು ಕಂಪ್ಯೂಟರಲ್ಲಿ ಎಂದರೆ ವಾಸ್ತವವಾಗಿ ಕಂಪ್ಯೂಟರ್ ಬ್ರೌಸರ್‌ನಲ್ಲಿ ಹುಡುಕಲು ಹೋಗುತ್ತೇವೆ. ಆದರೆ, ಈಗಲೂ ತೀರಾ ಸುತ್ತಿ ಬಳಸಿ ಹೆಚ್ಚುವರಿ ಕ್ಲಿಕ್‌ಗಳನ್ನು ಉಪಯೋಗಿಸಿಯೇ ಹುಡುಕುವವರು ಇದ್ದಾರೆ. ಬ್ರೌಸರ್ ತೆರೆದು ಅದರಲ್ಲಿ ಮತ್ತೆ 'Google' ಎಂದು ಬರೆದು ಸರ್ಚ್ ಮಾಡಿ, ಅಲ್ಲಿ ಹುಡುಕಲು ಹೋಗುವ ಹಂತದ ಬದಲು ಸುಲಭದ ಮತ್ತು ಶಾರ್ಟ್‌ಕಟ್ ವಿಧಾನ ಇಲ್ಲಿದೆ: ನೇರವಾಗಿ ಅಡ್ರೆಸ್ ಬಾರ್‌ನಲ್ಲಿಯೇ ನಿಮಗೆ ಬೇಕಾದ ವಿಚಾರವನ್ನು ಟೈಪ್ ಮಾಡಿ 'ಎಂಟರ್' ಕೊಟ್ಟರಾಯಿತು. ಅದು 'ಗೂಗಲ್' ಅಥವಾ 'ಬಿಂಗ್ ಸರ್ಚ್ ಎಂಜಿನ್' ಮೂಲಕ ನಿಮಗೆ ಬೇಕಾದ ಮಾಹಿತಿಯನ್ನು ತಕ್ಷಣವೇ ನಿಮ್ಮ ಮುಂದಿಡುತ್ತದೆ.
ಪ್ರಜಾವಾಣಿ ಅಥವಾ ಬೇರಾವುದೇ ವೆಬ್ ತಾಣ ನೋಡ ಬೇಕೆಂದಾದರೆ, ಗೂಗಲ್ ತೆರೆದು, ಅಲ್ಲಿ ಹುಡುಕಿ, ನಂತರ ಸಿಗುವ ಫಲಿತಾಂಶಗಳಿಂದ ಕ್ಲಿಕ್ ಮಾಡಲು ಹೋಗಬೇಡಿ. ನೇರವಾಗಿ ಅಡ್ರೆಸ್ ಬಾರ್‌ನಲ್ಲೇ 'Prajavani.net' ಅಥವಾ ಆಯಾ ತಾಣಗಳ ವೆಬ್ ವಿಳಾಸವನ್ನು ಟೈಪ್ ಮಾಡಿ ಎಂಟರ್ ಕೊಟ್ಟರಾಯಿತು. ಕೆಲವು 'ಡಾಟ್ Com' ತಾಣಗಳಿಗೆ ಹೋಗಬೇಕಿದ್ದರೆ ಮತ್ತೊಂದು ಸುಲಭವಾದ ಶಾರ್ಟ್‌ಕಟ್ ಇದೆ. ಅಡ್ರೆಸ್ ಬಾರ್‌ನಲ್ಲಿ ಸಂಬಂಧಪಟ್ಟ ತಾಣದ ವಿಳಾಸವನ್ನು ತಪ್ಪಿಲ್ಲದೆ ಟೈಪ್ ಮಾಡಿ, ಕಂಟ್ರೋಲ್ ಹಾಗೂ 'ಎಂಟರ್' (Enter) ಒತ್ತಿದರಾಯಿತು. ನೇರವಾಗಿ ಅದರ ಡಾಟ್ ಕಾಂ ತಾಣಕ್ಕೆ ಹೋಗುತ್ತೀರಿ. (ಡಾಟ್ ನೆಟ್, ಡಾಟ್ ಇನ್, ಡಾಟ್ ಆರ್ಗ್ ಮುಂತಾದ ಅನ್ಯ ಟಾಪ್ ಲೆವೆಲ್ ಡೊಮೇನ್[TLD]ಗಳಿಗೆ ಅನ್ವಯವಲ್ಲ.)
ವೆಬ್ ಜಾಲತಾಣದಲ್ಲಿ ಯಾವುದೇ ಪುಟವನ್ನು ನೋಡುತ್ತಿ ರುವಾಗ, ಕೆಳಕ್ಕೆ ಅಥವಾ ಮುಂದಿನ ಪುಟಕ್ಕೆ ಸ್ಕ್ರೋಲ್ ಆಗಲು ಮೌಸ್‌ನಲ್ಲಿರುವ 'ಸ್ಕ್ರಾಲ್ ಬಟನ್' ಅನ್ನು ತಿರುಗಿಸುವ ಬದಲು, ಕೀಬೋರ್ಡ್‌ನಲ್ಲಿರುವ 'ಸ್ಪೇಸ್' ಬಾರ್ ಒತ್ತಿ. ಮತ್ತೆ ಮೇಲಕ್ಕೆ ಬರಬೇಕಿದ್ದರೆ, 'ಶಿಫ್ಟ್' ಹಾಗೂ 'ಸ್ಪೇಸ್ ಬಾರ್' ಅನ್ನು ಒತ್ತಿ.
ಕಂಪ್ಯೂಟರಿನಲ್ಲಿರುವ ಅಪ್ಲಿಕೇಶನ್‌ಗಳು, ಪ್ರೋಗ್ರಾಂಗಳು, ಫೋಲ್ಡರುಗಳನ್ನು ಹುಡುಕಲು ಸುಲಭ ಮಾರ್ಗವೆಂದರೆ, 'ವಿಂಡೋಸ್' ಹಾಗೂ 'E ಬಟನ್'ಗಳನ್ನು ಏಕಕಾಲಕ್ಕೆ ಒತ್ತುವುದು. ಆಗ ಇಡೀ ಕಂಪ್ಯೂಟರಿನಲ್ಲಿರುವ ಫೈಲುಗಳನ್ನು ಜಾಲಾಡುವ (ಎಕ್ಸ್‌ಪ್ಲೋರರ್) ವ್ಯವಸ್ಥೆ ತೆರೆದುಕೊಳ್ಳುತ್ತದೆ. ಅಲ್ಲಿಂದ ಬೇಕಾದಲ್ಲಿಗೆ ಕ್ಲಿಕ್ ಮಾಡಿ ಮುಂದುವರಿಸಬಹುದು.
ಅಪ್ಲಿಕೇಶನ್ ಒಂದರಲ್ಲಿ ಏನೋ ಕೆಲಸ ಮಾಡುತ್ತಿರುವಾಗ, ಮರಳಿ ಡೆಸ್ಕ್‌ಟಾಪ್‌ಗೆ ಹೋಗಬೇಕೆಂದಾದರೆ, ನೇರವಾಗಿ ವಿಂಡೋಸ್ ಬಟನ್ ಹಾಗೂ 'D' ಅಕ್ಷರವನ್ನು ಏಕಕಾಲಕ್ಕೆ ಒತ್ತಿದರಾಯಿತು. ಇರುವ ಎಲ್ಲ ಅಪ್ಲಿಕೇಶನ್‌ಗಳು 'ಮಿನಿಮೈಸ್' ಆಗಿ, ಪರದೆಯ ಮೇಲೆ ಡೆಸ್ಕ್‌ಟಾಪ್ ಮಾತ್ರ ಕಾಣಿಸುತ್ತದೆ.
ಏಕಕಾಲಕ್ಕೆ ಎರಡು ವಿಂಡೋಗಳಲ್ಲಿ ಕೆಲಸ ಮಾಡಬೇಕೆಂದಾದರೆ, ವಿಂಡೋಸ್ ಬಟನ್ ಹಾಗೂ ಎಡ/ಬಲ ಬಾಣದ ಗುರುತು ಒತ್ತಿಬಿಡಿ. ಹಾಲಿ ಕೆಲಸ ಮಾಡುತ್ತಿರುವ ವಿಂಡೋ, ಎಡ/ಬಲದ ಅರ್ಧ ಭಾಗಕ್ಕೆ ಹೋಗಿ ನಿಲ್ಲುತ್ತದೆ. ಖಾಲಿ ಇರುವ ಭಾಗಕ್ಕೆ ಬೇರೊಂದು ವಿಂಡೋ ಹೊಂದಿಸಲು ಅವಕಾಶವಿದೆ.
ಏಕಕಾಲಕ್ಕೆ ಹಲವು ವಿಂಡೋಗಳಲ್ಲಿ ಕೆಲಸ ಮಾಡುತ್ತಿರುವಾಗ ತೆರೆದಿರುವ ನಿರ್ದಿಷ್ಟ ಅಪ್ಲಿಕೇಶನ್‌ಗೆ ಹೋಗಬೇಕಿದ್ದರೆ, ಒಂದೊಂದಾಗಿ ವಿಂಡೋಗಳನ್ನು ಮಿನಿಮೈಸ್ ಮಾಡಿಕೊಂಡೇ ಹೋಗಬೇಕಾಗಿಲ್ಲ. ಆಲ್ಟ್ ಹಾಗೂ ಟ್ಯಾಬ್ ಬಟನ್‌ಗಳನ್ನು ಒತ್ತಿದಾಗ ತೆರೆದಿರುವ ಎಲ್ಲ ವಿಂಡೋಗಳು ಕಾಣಿಸುತ್ತದೆ. ನಿಮಗೆ ಬೇಕಾದ ಅಪ್ಲಿಕೇಶನ್‌ಗೆ ನೇರವಾಗಿ ಹೋಗಬಹುದಾಗಿದೆ.
ಇನ್ನು, ಕಂಪ್ಯೂಟರ್‌ನಲ್ಲಿ ಏನೋ ಮಾಡುತ್ತಿದ್ದೀರಿ. ದಿಢೀರನೇ ಯಾರೋ ಬರುತ್ತಾರೆ. ಆದರೆ ನಿಮ್ಮ ಕೆಲಸದ ಗೋಪ್ಯತೆ ಕಾಪಾಡುವುದಕ್ಕಾಗಿ ಅಥವಾ ನೀವೇ ನಿಮ್ಮ ಸ್ಥಾನದಿಂದ ಎದ್ದುಹೋಗುವಾಗ ಕಂಪ್ಯೂಟರ್ ಸ್ಕ್ರೀನ್ ಅನ್ನು ಲಾಕ್ ಮಾಡಿಹೋಗುವ ಸುರಕ್ಷತೆಯ ಶಿಷ್ಟಾಚಾರ ಪಾಲಿಸಬೇಕಿದ್ದರೆ, ಸ್ಕ್ರೀನ್ ಲಾಕ್ ಮಾಡಲು ವಿಂಡೋಸ್ ಬಟನ್ ಹಾಗೂ 'L' ಬಟನ್ ಒತ್ತಿದರಾಯಿತು. ಇವಿಷ್ಟು ಪ್ರಮುಖ ಶಾರ್ಟ್‌ಕಟ್‌ಗಳು ನಮ್ಮ ದೈನಂದಿನ ಕೆಲಸ-ಕಾರ್ಯಗಳಿಗೆ ಅತ್ಯುಪಯುಕ್ತ. ಇವನ್ನು ಕಲಿತುಕೊಂಡು, ಕೆಲಸಕ್ಕೆ ವೇಗವನ್ನು ನೀಡೋಣ.