ಕಾಸರಗೋಡು: ಶಾಲಾ-ಕಾಲೇಜು ಆವರಣದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವಿತರಣೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಕುಟುಂಬಶ್ರೀ ಮತ್ತು ಜಿಲ್ಲಾ ಪಂಚಾಯತ್ ಕೈಜೋಡಿಸಿ 'ಮಾ ಕೇರ್ ಸೆಂಟರ್' ಜಾರಿಗೆ ಬರುತ್ತಿದೆ. ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ಒದಗಿಸಲು ಕಿಯೋಸ್ಕ್‍ಗಳನ್ನು ಶಾಲೆಯ ಒಳಗೆ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಬೆಳಗ್ಗೆ ಹಾಗೂ ಮಧ್ಯಾಹ್ನದ ವಿರಾಮದ ವೇಳೆ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ತೆರಳಿ ಕಲಿಕೋಪಕರಣ ಸಾಮಗ್ರಿ ಖರೀದಿ ನೆಪದಲ್ಲಿ ಪೇಟೆ ಸುತ್ತಾಡುವುದು, ಕೆಲವೊಂದು ಅನಪೇಕ್ಷಿತ ತಿನಿಸು ಸೇವಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಕಿಯೋಸ್ಕ್ ಸ್ಥಾಪನೆಗೆ ಮುಂದಾಗಿದೆ. ಈ ರೀತಿ ಸುತ್ತಾಡುವ ಮಕ್ಕಳನ್ನು ಕೇಂದ್ರೀಕರಿಸಿ ಡ್ರಗ್ಸ್ ಮಾಫಿಯಾಗಳು ಲಾಬಿ ನಡೆಸುವ ಸಾಧ್ಯತೆಯನ್ನೂ ಮನಗಂಡು ಇಂತಹ ಯೋಜನೆಗೆ ಚಾಲನೆ ನೀಡಲಾಗಿದೆ.
ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈಗಾಘಲೇ ಸ್ಥಾಪಿಸಲಾಗಿದೆ. ನ್ಯೂಟ್ರಿಮಿಕ್ಸ್ ಆಹಾರ ಉತ್ಪನ್ನಗಳನ್ನೂ ಮಾ ಕೇರ್ ಸೆಂಟರ್‍ಗಳಲ್ಲಿ ಪೂರೈಸಲಾಗುತ್ತಿದೆ. ಇದಕ್ಕಾಗಿ ಶಾಲೆಗಳಲ್ಲಿ 300 ಚದರ ಅಡಿ ಕಟ್ಟಡ ನಿರ್ಮಿಸಲಾಗಿದೆ. ಮಾ ಕೇರ್ ಸೆಂಟರನ್ನು ಉದ್ಯಮ ಘಟಕವಾಗಿ ಶಾಲಾ ವಠಾರದಲ್ಲಿ ಆರಂಭಿಸಲಾಗಿದೆ. 7 ಲಕ್ಷ ರೂ. ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಜಿಲ್ಲಾ ಪಂಚಾಯಿತಿ ವತಿಯಿಂದ 3.5 ಲಕ್ಷ ಸಹಾಯಧನ ನೀಡಲಿದೆ. ಜಿಲ್ಲೆಯ ಕಿನಾನೂರ್ ಕರಿಂದಲಂ ಪಂಚಾಯಿತಿಯ ಚಾಯೋತ್ ಶಾಲೆಯಲ್ಲಿ ಮಾ ಕೇರ್ ಯೋಜನೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಲಾಗಿದೆ.
ಹದಿಹರೆಯದವರಲ್ಲಿ ಮಾದಕ ದ್ರವ್ಯ ಸೇವನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದ್ದು, ಕುಟುಂಬಶ್ರೀ ಜಿಲ್ಲಾ ಮಿಷನ್‍ನ ವಿಮುಕ್ತಿ, ಯೋಧಾ ಮತ್ತು ಸುರಕ್ಷಾಶ್ರೀ ಯೋಜನೆಗಳ ಮುಂದುವರಿಕೆಯನ್ವಯ 'ಮಾ ಕೇರ್' ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಬೇಡಡ್ಕದಲ್ಲಿ ಮಾ ಕೇರ್ ಸೆಂಟರ್:
ಬೇಡಡ್ಕ ಗ್ರಾ.ಪಂ.ನಲ್ಲಿ ಆರಂಭಗೊಂಡ ಮಾ ಕೇರ್ ಸೆಂಟರನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯು ಕುಟುಂಬಶ್ರೀ ಮತ್ತು ಜಿಲ್ಲಾ ಪಂಚಾಯತ್‍ಅಳವಡಿಸಲಾಗಿದೆ. ಮಾ ಕೇರ್ ಎನ್ನುವುದು ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ಶಾಲೆಯೊಳಗೆ ಒದಗಿಸುವ ಯೋಜನೆಯಾಗಿದೆ.ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಪುಸ್ತಕ ಮಳಿಗೆ ಉದ್ಘಾಟಿಸಿದರು. .
ಅಭಿಮತ:
ಮಧ್ಯಾಹ್ನ ಮತ್ತು ಇತರ ವಿರಾಮದ ಸಮಯದಲ್ಲಿ ಮಕ್ಕಳು ವಿವಿಧ ಉದ್ದೇಶಗಳಿಗಾಗಿ ಶಾಲೆಯ ಹೊರಗಿನ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದ ಲಾಭವನ್ನು ಡ್ರಗ್ ಮಾಫಿಯಾಗಳು ಬಳಸಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಮಾ-ಕೇರ್ ಯೋಜನೆಯ ಮೂಲಕ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಶಾಲೆಯಲ್ಲೇ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾಕೇರ್ ಯೋಜನೆ ಜಾರಿಗೊಳಿಸಲಾಗಿದೆ.
ಹರಿದಾಸ್, ಎಡಿಎಂಸಿ
ಕುಟುಂಬಶ್ರೀ ಕಾಸರಗೋಡು