ಕಾಸರಗೋಡು: ಐದು ವರ್ಷಗಳ ಹಿಂದೆ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣ ಭೇದಿಸಲು ಶ್ವಾನ ದಳದೊಂದಿಗೆ ಜಿಲ್ಲೆಗೆ ಆಗಮಿಸಿದ್ದ ಪೊಲೀಸ್ ಪಡೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಬರಿಗೈಯಲ್ಲಿ ವಾಪಸಾಗಿದೆ.
ಯಾವುದೇ ಮಹತ್ವದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. 2019 ಸೆ. 19ರಂದು ದಿಢೀರ್ ನಾಪತ್ತೆಯಾಗಿದ್ದ ಮೂಲತ: ಕೊಲ್ಲಂ ಇರವಿಪುರಂ ನಿವಾಸಿ ಪ್ರಮೀಳಾ(30)ಎಂಬಾಕೆಯನ್ನು ಆಕೆ ಪತಿಯೇ ಕೊಲೆಗೈದು ಹೊಳೆಗೆ ಎಸೆದಿರುವುದಾಗಿ ವಿದ್ಯಾನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮೃತದೇಹ ಪತ್ತೆಹಚ್ಚಲು ಅಂದು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ನಂತರ ಕ್ರೈಂ ಬ್ರಾಂಚ್‍ಗೆ ಪ್ರಕರಣ ಹಸ್ತಾಂತರಿಸಲಾಗಿತ್ತು. ಹೊಸದಾಗಿ ಅಧಿಕಾರ ವಹಿಸಿಕೊಂಡ ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಸುನಿಲ್ ಕುಮಾರ್ ಅವರಿಗೆ ಲಭಿಸಿದ ಮಾಹಿತಿಯನ್ವಯ ಕೊಚ್ಚಿಯ ಎರಡು ವಿಶೇಷ ಶ್ವಾನದಳದೊಂದಿಗೆ ಜಿಲ್ಲೆಯ ನಿಗದಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆ ಸಾಧ್ಯವಾಗಿರಲಿಲ್ಲ.