ನವದೆಹಲಿ: ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಕಳೆದ 10 ವರ್ಷಗಳು ಮೋದಿ ನಿರ್ಮಿತ ಉದ್ಯೋಗ ಕ್ಷಾಮ ಮತ್ತು ಅನ್ಯಾಯದ ಪರ್ವಕಾಲವಾಗಿದೆ' ಎಂದು ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತೀಯ ಕಾರ್ಮಿಕ ಮಾರುಕಟ್ಟೆಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ದೀರ್ಘಾವಧಿಯ ಪ್ರವೃತ್ತಿಗಳ ವಿಶ್ಲೇಷಣೆಯೊಂದನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
'ದೇಶದಲ್ಲಿ ಈ ರೀತಿಯ ಉದ್ಯೋಗದ ಕ್ಷಾಮವು ಮೋದಾನಿಕರಣದ (ಮೋದಿ ಮತ್ತು ಅದಾನಿ) ಆರ್ಥಿಕತೆಯಿಂದ ಉಂಟಾಗಿದೆ. 10 ವರ್ಷಗಳ ಹಿಂದಕ್ಕೆ ಹೋಲಿಸಿದರೆ, ದೇಶದಲ್ಲಿ ಕಡಿಮೆ ಉದ್ಯೋಗವಿದೆ, ಅಲ್ಲದೆ, ಕಡಿಮೆ ವೇತನ ನೀಡಲಾಗುತ್ತಿದೆ. ಇದು ಯುವಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದು ಅನ್ಯಾಯದ ಪರ್ವಕಾಲ' ಎಂದು ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'2014ರಲ್ಲಿ, ಮಾರುಕಟ್ಟೆಯು ಹೆಚ್ಚು ನ್ಯಾಯೋಚಿತವಾಗಿತ್ತು. ಆಗ ಅಗ್ರ 20 ಕಂಪನಿಗಳು ಶೇ 40 ಲಾಭ ಗಳಿಸುತ್ತಿದ್ದವು. ಇಂದು ಭಾರತದಲ್ಲಿನ ಅಗ್ರ 20 ಕಂಪನಿಗಳಿಗೆ ಮಾತ್ರ ಶೇ 90 ಲಾಭ ಸಿಗುತ್ತಿದೆ. ಉಳಿದ ಲಕ್ಷಾಂತರ ಕಂಪನಿಗಳು ಕೇವಲ ಶೇ 10 ಲಾಭ ಪಡೆಯುತ್ತಿವೆ' ಎಂದು ಅವರು ಹೇಳಿದ್ದಾರೆ.
'2014ರಲ್ಲಿ ಅದಾನಿ ವಿಶ್ವದ 609ನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಅವರ ಸಂಪತ್ತಿನ ಮೌಲ್ಯ ಅಂದಾಜು ₹66,400 ಕೋಟಿ ಇತ್ತು. ಮೋದಿ ಅವರ ಮ್ಯಾಜಿಕ್‌ನಿಂದ ಕೇವಲ ಹತ್ತು ವರ್ಷಗಳಲ್ಲಿ ಅದಾನಿ ಸಂಪತ್ತು ಹತ್ತುಪಟ್ಟು ಹೆಚ್ಚಾಗಿ, 6.6 ಲಕ್ಷ ಕೋಟಿಗೆ ಏರಿದೆ. ಈಗ ಅದಾನಿ ವಿಶ್ವದ ಎರಡನೇ ಸಿರಿವಂತ. ಪ್ರಧಾನಿಯವರು ಅದಾನಿಯವರಿಗೆ ಉದಾರವಾಗಿ ಆರು ವಿಮಾನ ನಿಲ್ದಾಣಗಳು, ವಿದ್ಯುತ್ ಸ್ಥಾವರಗಳು, ಅನಿಲ ಕೊಳವೆ ಮಾರ್ಗಗಳು ಮತ್ತು ಈಗ ಮುಂಬೈನ ಧಾರಾವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ನಮ್ಮ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ತಯಾರಿಕೆ ಹೊಣೆಯನ್ನೂ 'ಪ್ರಧಾನಿಯವರ ಆತ್ಮೀಯ ಗೆಳೆಯ'ನಿಗೆ ಹಸ್ತಾಂತರಿಸಲಾಗಿದೆ. ಇದು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ? ತುಂಬಾ ಕಡಿಮೆ' ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.