ಬದಿಯಡ್ಕ:ಭಾರತವು ಜಗತ್ತಿನ ಕಣ್ಣು. ಇಲ್ಲಿ ಸಂಸ್ಕಾರಗಳು ಅಗ್ರಮಾನ್ಯ. ಜ್ಞಾನ ಚಕ್ಷುವಿನಿಂದ ದಿವ್ಯ ಚಕ್ಷುವಿನ ಕಡೆಗೆ ಸಾಗಲು ಗುರುವಿನ ಮಾರ್ಗದರ್ಶನ ಅಗತ್ಯ. ಅಂತಹಾ ಗುರುವನ್ನು ಗೌರವಿಸುವುದು ಸತ್ಕಾರ್ಯವಾಗಿದೆ' ಎಂದು ಆರ್ ಎಸ್ ಎಸ್ ಕುಟುಂಬ ಪ್ರಭೋದನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ನಾರಂಪಾಡಿ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯ ರಜತೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಪಿಟೀಲುವಾದಕರಿಗೆ ಗುರುಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಕೆ. ವೆಂಕಟ್ರಾಮ್, ನೆಡುಮಾಂಗಾಡ್ ಶಿವಾನಂದನ್, ತಿರುವಿಝಾ ಶಿವಾನಂದನ್ ಅವರಿಗೆ ಶಾಸ್ತ್ರೋಕ್ತವಾಗಿ ಗುರುಪೂಜೆ ಸಲ್ಲಿಸಲಾಯಿತು. ಆಲಂಗಾರು ರಾಧಾಕೃಷ್ಣ ಭಟ್ ಧಾರ್ಮಿಕ ಕಾರ್ಯ ನಡೆಸಿದರು. ಬಳ್ಳಪದವು ಯೋಗೀಶ ಶರ್ಮ ಹಾಗೂ ರಮ್ಯಾ ಬಳ್ಳಪದವು ಗುರುಪೂಜೆ ನೆರವೇರಿಸಿದರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಪ್ರಸಿದ್ದ ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ನಂತರ ಖ್ಯಾತ ಕಲಾವಿದರಿಂದ ಸಂಗೀತ, ಪಿಟೀಲುವಾದನ, ಕೊಳಲುವಾದನ, ಮೋಹಿನಿಯಾಟ್ಟಂ ಮೊದಲಾದ ಕಾರ್ಯಕ್ರಮಗಳು ನಡೆದುವು.