ನವದೆಹಲಿ: ಕೇಂದ್ರ ಸರ್ಕಾರವು ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಹಣವನ್ನು ತಡೆ ಹಿಡಿಯುತ್ತಿದೆ ಎಂಬ ಆರೋಪಕ್ಕೆ ಸೋಮವಾರ ಸಂಸತ್ ಅಧಿವೇಶನದಲ್ಲಿ ಉತ್ತರಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದೊಂದು ರಾಜಕೀಯ ವಿರೋಧಿ ಹೇಳಿಕೆ ಹಾಗೂ ಪಟ್ಟ ಭದ್ರ ಹಿತಾಸಕ್ತಿಗಳು ಈ ರೀತಿ ಹೇಳಿಕೆ ನೀಡುತ್ತವೆ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನೀಡಬೇಕಾದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ಸಂಸತ್‌ನಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಉಲ್ಲೇಖಿಸಿ, ಪ್ರಶ್ನಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸೀತಾರಾಮನ್, ಆಡಳಿತ ವ್ಯವಸ್ಥೆ ಉತ್ತಮವಾಗಿದೆ, ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.
'ಆಡಳಿತ ವ್ಯವಸ್ಯೆಯಲ್ಲಿ ನನಗೆ ಈ ರಾಜ್ಯ ಇಷ್ಟವಿಲ್ಲ ಆದ ಕಾರಣ ಈ ರಾಜ್ಯಕ್ಕೆ ನೀಡಬೇಕಾದ ಹಣವನ್ನು ತಡೆ ಹಿಡಿಯಿರಿ ಎಂದು ಹಣಕಾಸು ಸಚಿವರು ಮಧ್ಯಪ್ರವೇಶಿಸಿ ಹೇಳಲಾಗುವುದಿಲ್ಲ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಸರಿಯಾಗಿ ಹಣ ಮಂಜೂರು ಮಾಡದ ಹಿನ್ನೆಲೆ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರು ಸೇರಿದಂತೆ ಕಾಂಗ್ರೆಸ್ ರಾಜ್ಯ ಘಟಕವು ಫೆಬ್ರುವರಿ 7ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಎಂದು ವರದಿಯಾಗಿದೆ.