ನವದೆಹಲಿ: ಆರೋಪಿಯ ಬಂಧನಕ್ಕೆ ಸಂಬಂಧಿಸಿದ ಕಾರಣಗಳನ್ನು ಬಂಧಿಸುವ ವೇಳೆಯೇ ನೀಡಬೇಕಾಗಿಲ್ಲ. ಬಂಧನವಾದ 24 ಗಂಟೆಗಳ ಒಳಗಾಗಿ ಆರೋಪಿಗೆ ಲಿಖಿತವಾಗಿ ತಿಳಿಸಿದರೆ ಸಾಕು ಎಂಬ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನವದೆಹಲಿ: ಆರೋಪಿಯ ಬಂಧನಕ್ಕೆ ಸಂಬಂಧಿಸಿದ ಕಾರಣಗಳನ್ನು ಬಂಧಿಸುವ ವೇಳೆಯೇ ನೀಡಬೇಕಾಗಿಲ್ಲ. ಬಂಧನವಾದ 24 ಗಂಟೆಗಳ ಒಳಗಾಗಿ ಆರೋಪಿಗೆ ಲಿಖಿತವಾಗಿ ತಿಳಿಸಿದರೆ ಸಾಕು ಎಂಬ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ರಿಯಲ್ ಎಸ್ಟೇಟ್ ಕಂಪನಿ ರಾಮ್ ಕಿಶೋರ್ ಅರೋರಾ ಅವರು ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಸತೀಶ್ಚಂದ್ರ ಶರ್ಮ ಅವರಿದ್ದ ಪೀಠವು ಅರೋರಾ ಅವರ ಅರ್ಜಿಯ ವಿಚಾರಣೆ ನಡೆಸಿತು.
ತಮ್ಮನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರೋರಾ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆಗ, ಪಂಕಜ್ ಬನ್ಸಾಲ್ ಪ್ರಕರಣವನ್ನು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಅರೋರಾ, ಬನ್ಸಾಲ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಪೂರ್ವಾನ್ವಯ ಮಾಡಿ, ತಮ್ಮನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಕಾನೂನುಬಾಹಿರ ಎಂಬುದಾಗಿ ಘೋಷಿಸುವಂತೆ ಈ ಹಿಂದೆ ಕೋರಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್ 2023ರ ಡಿಸೆಂಬರ್ 15ರಂದು ತೀರ್ಪು ನೀಡಿತ್ತು.
ಕಳೆದ ವರ್ಷ ಡಿಸೆಂಬರ್ 15ರಂದು ನೀಡಿದ್ದ ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರೋರಾ ಅರ್ಜಿ ಸಲ್ಲಿಸಿದ್ದರು.
'ಈ ಪೀಠವು ನೀಡಿದ್ದ ತೀರ್ಪು ಹಾಗೂ ಮರುಪರಿಶೀಲನಾ ಅರ್ಜಿಯನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ತೀರ್ಪನ್ನು ಮರುಪರಿಶೀಲನೆ ಮಾಡುವ ಅಗತ್ಯವೇ ಇಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಹೀಗಾಗಿ, ಈ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದೇವೆ' ಎಂದು ನ್ಯಾಯಮೂರ್ತಿಗಳು ಜನವರಿ 31ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸುವುದಕ್ಕೂ ಮುನ್ನ, ಬಂಧಿಸುವುದಕ್ಕೆ ಕಾರಣಗಳನ್ನು ಆರೋಪಿಗೆ ಲಿಖಿತವಾಗಿ ನೀಡಬೇಕು. ಈ ಕಾರ್ಯವನ್ನು ಆರೋಪಿಯನ್ನು ಬಂಧಿಸಿದ 24 ಗಂಟೆ ಒಳಗಾಗಿ ಮಾಡಬೇಕು. ಬಂಧನದ ಸಮಯದಲ್ಲಿಯೇ ಕಾರಣಗಳನ್ನು ಲಿಖಿತವಾಗಿ ತಿಳಿಸುವ ಅಗತ್ಯ ಇಲ್ಲ ಎಂದೂ ಸುಪ್ರೀಂ ಕೋರ್ಟ್ 2023ರ ಡಿಸೆಂಬರ್ 15ರಂದು ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.