ಕೋಯಿಕ್ಕೋಡ್: ಜನವರಿ 30ರಂದು ಮಹಾತ್ಮ ಗಾಂಧಿ ಹುತಾತ್ಮ ದಿನದಂದು ನಾಥೂರಾಮ್ ವಿನಾಯಕ್ ಗೋಡ್ಸೆಯನ್ನು ಹೊಗಳಿ ಕಾಮೆಂಟ್ ಮಾಡಿದ್ದ ಕೇರಳದ ಕೋಯಿಕ್ಕೋಡ್ ಮೂಲದ ಎನ್‌ಐಟಿ ಪ್ರೊಫೆಸರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಶೈಜಾ ಆಂಡವನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಗೋಡ್ಸೆಯನ್ನು ಹೊಗಳಿದ್ದಾರೆ.
'Adv Krishnaraj' ಎಂಬ ಫೇಸ್‌ಬುಕ್ ಬಳಕೆದಾರ, ಗೋಡ್ಸೆಯ ಚಿತ್ರವನ್ನು, ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಮ್ ವಿನಾಯಕ್ ಗೋಡ್ಸೆ ಮತ್ತು ಭಾರತದಲ್ಲಿ ಅನೇಕ ಜನರ ನಾಯಕ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ಈ ಪೋಸ್ಟ್ಗೆ ಪ್ರೊಫೆಸರ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶೈಲಜಾ, ಗೋಡ್ಸೆ, ಗಾಂಧಿಯನ್ನು ಏಕೆ ಕೊಂದ? ಎಂಬ ಲೇಖನವನ್ನು ಓದಿದ್ದೇನೆ. ಈ ಹಿನ್ನೆಲೆಯಲ್ಲಿ ಕಾಮೆಂಟ್ ಮಾಡಿದೆ. ಆದರೆ, ಅದು ವಿವಾದವಾಗುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ಕೆಲಸವೇ ಕಲಿಸುವುದು. ಲೇಖನವನ್ನು ಓದಿದ ಆಧಾರದ ಮೇಲೆ ಮಾತ್ರ ಇಂತಹ ಕಾಮೆಂಟ್ ಮಾಡಲಾಗಿದೆ ಎಂದು ಹೇಳಿದರು.
ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಡಿವೈಎಫ್‌ಐ ಕೂಡ ಕೋಯಿಕ್ಕೋಡ್ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಗಾಂಧಿಯನ್ನು ಕೊಂದ ಗೋಡ್ಸೆಗೆ ಮರಣದಂಡನೆ ವಿಧಿಸಿದಾಗ ಗೋಡ್ಸೆ ದೇಶವನ್ನು ರಕ್ಷಿಸಿದ ಎಂದು ಹೇಳುವ ಮೂಲಕ ಪ್ರಾಧ್ಯಾಪಕರು ದೇಶದ್ರೋಹ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಸಮಾಜದಲ್ಲಿ ಗಲಭೆ ಎಬ್ಬಿಸುವ ಪ್ರಯತ್ನದ ಭಾಗವಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.