ಬದಿಯಡ್ಕ: ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದೊಂದಿಗೆ ಆರು ದಿನಗಳ ಕನ್ನಡ ಸಂಸ್ಕøತಿ ಶಿಬಿರ 2024 ಏಪ್ರಿಲ್ 1ರಿಂದ ಏಪ್ರಿಲ್ 6ರ ತನಕ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಶಾಲೆಯಲ್ಲಿ ಜರಗಲಿರುವುದು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಪ್ರಜ್ವಲನೆಗೈದು ಶಿಬಿರಕ್ಕೆ ಚಾಲನೆ ನೀಡಲಿರುವರು. ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯ ತನಕ ನಡೆಯಲಿರುವ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ, ತರಗತಿ ನಡೆಸಿಕೊಡಲಿರುವರು. ಇದೇ ಸಂದರ್ಭದಲ್ಲಿ ಯುವ ಸಾಧಕ, ಕೈಗಾರಿಕಾ ವಲಯದಲ್ಲಿ ಜಿಲ್ಲಾಮಟ್ಟದ ಉತ್ಪಾದನಾ ಉದ್ಯಮಿ ಪ್ರಶಸ್ತಿ ಪಡೆದ ಉದ್ಯಮಿ ಮುರಲೀಕೃಷ್ಣ ಕೆ.ಪಿ. ಸ್ಕಂದ ಪ್ಲಾಸ್ಟಿಕ್ಸ್ ಕೋಟೂರು ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಉಚಿತವಾಗಿ ನಡೆಯುವ ಶಿಬಿರಕ್ಕೆ ಭದ್ರತಾ ಠೇವಣಿ 300 ರೂ. ಪಾವತಿಸಬೇಕಾಗಿದೆ. 10ರಿಂದ 16 ವರ್ಷದ ಒಳಗಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಉಪಯೋಗಿಸಬಹುದಾಗಿದೆ. ಐದೂ ದಿನಗಳು ಹಾಜರಾದ ಮಕ್ಕಳಿಗೆ ಕೊನೆಯ ದಿನ ಆ ಮೊತ್ತವನ್ನು ಹಿಂತಿರುಗಿಸಲಾಗುವುದು. ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ. ಭೋಜನಕ್ಕೆ ತಟ್ಟೆ ಹಾಗೂ ಲೋಟವನ್ನು ಶಿಬಿರಾರ್ಥಿಗಳು ತರಬೇಕು. ಹೆಚ್ಚಿನ ಮಾಹಿತಿಗಳಿಗೆ ಅಧ್ಯಕ್ಷರು, ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ, ಎಡನೀರು. ಮೊಬೈಲ್ 9447375191 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.