ತಿರುವನಂತಪುರಂ: ಈ ವರ್ಷದ ಎಸ್‍ಎಸ್‍ಎಲ್‍ಸಿ/ಟಿಎಚ್‍ಎಸ್‍ಎಲ್‍ಸಿ/ಎಎಚ್‍ಎಲ್‍ಸಿ ಪರೀಕ್ಷೆ ಇಂದು ಸೋಮವಾರ ಆರಂಭವಾಗಿದೆ.
4,27,105 ವಿದ್ಯಾರ್ಥಿಗಳು ರಾಜ್ಯದ 2,995 ಕೇಂದ್ರಗಳಲ್ಲಿ, ಲಕ್ಷದ್ವೀಪದ ಒಂಬತ್ತು ಕೇಂದ್ರಗಳಲ್ಲಿ ಮತ್ತು ಗಲ್ಫ್ ದೇಶದ ಏಳು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಮಾ.25ರವರೆಗೆ ಪರೀಕ್ಷೆಗಳು ನಡೆಯಲಿದೆ.
ಮಲಪ್ಪುರಂ ಕಂದಾಯ ಜಿಲ್ಲೆಯ ಮಲಪ್ಪುರಂ ಶಿಕ್ಷಣ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 28,180 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರತೆ. ಆಲಪ್ಪುಳ ಕಂದಾಯ ಜಿಲ್ಲೆಯ ಕುಟ್ಟನಾಡ್ ಶಿಕ್ಷಣ ಜಿಲ್ಲೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳನ್ನು ಹೊಂದಿದೆ, 1,843 ವಿದ್ಯಾರ್ಥಿಗಳಷ್ಟೇ ಇಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಗಲ್ಫ್ ಪ್ರದೇಶದಲ್ಲಿ, 536 ಮಂದಿ ವಿದ್ಯಾರ್ಥಿಗಳು ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ 285 ವಿದ್ಯಾರ್ಥಿಗಳು ಹಾಜರಾಗುತ್ತಾರೆ.
ಏಪ್ರಿಲ್ 3ರಿಂದ 20ರವರೆಗೆ ಮೌಲ್ಯಮಾಪನ ನಡೆಯಲಿದೆ. ರಾಜ್ಯಾದ್ಯಂತ 70 ಕೇಂದ್ರೀಕೃತ ಮೌಲ್ಯಮಾಪನ ಶಿಬಿರಗಳಲ್ಲಿ ಎರಡು ಹಂತಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಶಿಬಿರಗಳಿಗೆ ಹೆಚ್ಚುವರಿ ಮುಖ್ಯ ಪರೀಕ್ಷಕರು ಮತ್ತು ಸಹಾಯಕ ಪರೀಕ್ಷಕರ ನೇಮಕಾತಿ ಆದೇಶಗಳು ಪರೀಕ್ಷಾ ಮಂಡಳಿಯ ವೆಬ್‍ಸೈಟ್‍ನಲ್ಲಿ 10 ರಿಂದ ಲಭ್ಯವಿರುತ್ತವೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಲಕ್ಷ್ಯ ಹೊಂದಲಾಗಿದೆ.