ನವದೆಹಲಿ: ಹೊಸ ಸರ್ಕಾರದ ಮೊದಲ 100 ದಿನ ಮತ್ತು ಐದು ವರ್ಷಗಳ ಕರಡು ಕಾರ್ಯಸೂಚಿ ಸಿದ್ಧಪಡಿಸುವಂತೆ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ, ಮೊದಲ 100 ದಿನಗಳು ಮತ್ತು ಮುಂದಿನ ಐದು ವರ್ಷಗಳ ಕಾರ್ಯಸೂಚಿಯನ್ನು ಹೇಗೆ ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಚರ್ಚಿಸಲು ಆಯಾ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾಗುವಂತೆ ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ. ಚುನಾವಣಾ ಆಯೋಗದ ಶಿಫಾರಸನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸುವ ಮೂಲಕ ಏಳು ಹಂತದ ಸಂಸತ್ತಿನ ಚುನಾವಣೆಯ ದಿನಾಂಕಗಳನ್ನು ತಿಳಿಸುವ ಪ್ರಕ್ರಿಯೆಯನ್ನು ಕ್ಯಾಬಿನೆಟ್ ಪ್ರಾರಂಭಿಸಿತು. ಏಪ್ರಿಲ್ 19 ರಂದು 102 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆಗೆ ಮಾರ್ಚ್ 20 ರಂದು ಮೊದಲ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅಧಿಸೂಚನೆಯ ಬಿಡುಗಡೆಯೊಂದಿಗೆ ನಿರ್ದಿಷ್ಟ ಹಂತಕ್ಕೆ ನಾಮನಿರ್ದೇಶನ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
ಮಾರ್ಚ್ 3ರಂದು ನಡೆದಿದ್ದ ಮಂತ್ರಿ ಪರಿಷತ್ತಿನ ಸಭೆಯಲ್ಲಿ ಎಲ್ಲಾ ಸಿವರು ವಿಕಸಿತ ಭಾರತ 2047ಕ್ಕೆ ತಮ್ಮದೇ ಆದ ಚಿಂತನೆಗಳನ್ನು ಹಂಚಿಕೊಂಡಿದ್ದರು. ಮುಂದಿನ ಐದು ವರ್ಷಗಳಿಗಾಗಿ ವಿಸ್ತೃತ ಕ್ರಿಯಾ ಯೋಜನೆ ಕುರಿತು ಚರ್ಚಿಸಲಾಗಿತ್ತು.ಜೂನ್‌ನಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳಿಗಾಗಿ 100 ದಿನಗಳ ಕಾರ್ಯಸೂಚಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು.
ವಿಕಸಿತ ಭಾರತದ ಮಾರ್ಗಸೂಚಿಯು ಎರಡು ವರ್ಷಗಳ ತೀವ್ರ ಸಿದ್ಧತೆಯ ಫಲಿತಾಂಶವಾಗಿರುತ್ತದೆ. ಎಲ್ಲ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ನಾಗರಿಕ ಸಮಾಜ, ವೈಜ್ಞಾನಿಕ ಸಂಸ್ಥೆಗಳು, ಯುವಕರು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ನಡೆಸಿದ ವ್ಯಾಪಕ ಸಮಾಲೋಚನೆಗಳನ್ನೊಳಗೊಂಡ ಸಂಪೂರ್ಣ ಸಹಕಾರದ ವಿಧಾನವನ್ನು ಒಳಗೊಂಡಿರುತ್ತದೆ.ವಿವಿಧ ಹಂತಗಳಲ್ಲಿ 2,700 ಕ್ಕೂ ಹೆಚ್ಚು ಸಭೆಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ನಡೆಸಲಗಿದ್ದು, 20 ಲಕ್ಷಕ್ಕೂ ಹೆಚ್ಚು ಯುವಕರ ಸಲಹೆಗಳನ್ನು ಸ್ವೀಕರಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.