ನವದೆಹಲಿ: 'ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ.ಕವಿತಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಆಮ್ ಆದ್ಮಿ ಪಕ್ಷದ ನಾಯಕರಿಗೆ ₹100 ಕೋಟಿ ಕಿಕ್‌ಬ್ಯಾಕ್ ನೀಡಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ (ಇ.ಡಿ) ಆರೋಪವು ಸತ್ಯಕ್ಕೆ ದೂರವಾಗಿದೆ' ಎಂದು ದೆಹಲಿ ಹಣಕಾಸು ಸಚಿವೆ ಅತಿಶಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕರಾದ ಅರವಿಂದ ಕೇಜ್ರಿವಾಲ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವುದು ಬಿಜೆಪಿಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಯನ್ನು (ಇ.ಡಿ) ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಆರೋಪಿಸಿದ್ದಾರೆ.
ಅಬಕಾರಿ ನೀತಿ ಮೂಲಕ ಅನುಕೂಲ ಪಡೆದುಕೊಳ್ಳಲು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿಗೆ ₹100 ಕೋಟಿ ನೀಡುವ ಮೂಲಕ ಕೆ.ಕವಿತಾ ಅವರು 'ಸಂಚು' ನಡೆಸಿದ್ದರು ಎಂದು ಇ.ಡಿ ಆರೋಪಿಸಿತ್ತು.
ಎಎಪಿ ಪ್ರಮುಖ ನಾಯಕರಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರ ಜೊತೆಗೂಡಿ ಕವಿತಾ ಮತ್ತು ಇತರರು ಸಂಚು ನಡೆಸಿದ್ದರು ಎಂದು ಇ.ಡಿ ದೂರಿತ್ತು.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ, 46 ವರ್ಷದ ಕವಿತಾ ಅವರನ್ನು ಇ.ಡಿ ಕಳೆದ ವಾರ ಹೈದರಾಬಾದ್‌ನ ಅವರ ನಿವಾಸದಲ್ಲಿಯೇ ಬಂಧಿಸಿತ್ತು. ಕವಿತಾ ಅವರನ್ನು ಮಾರ್ಚ್ 23ರವರೆಗೆ ಇ.ಡಿ ವಶಕ್ಕೆ ಒಪ್ಪಿಸಲಾಗಿದೆ.