ವಿಶ್ವಸಂಸ್ಥೆ : ದಿನಂಪ್ರತಿ ಜಾಗತಿಕವಾಗಿ ಪ್ರತಿದಿನ 100 ಕೋಟಿ ಊಟಗಳು ವ್ಯರ್ಥವಾಗಿ ಹೋಗುತ್ತಿವೆ. ಇನ್ನೊಂದೆಡೆ ಜಗತ್ತಿನ ಮಾನವಕುಲದ ಮೂರನೇ ಒಂದು ಭಾಗವು ಆಹಾರದ ಅಭದ್ರತೆಯನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ (ಯುನ್‌ಇಪಿ)ಯ 2024ನೇ ಸಾಲಿನ ಆಹಾರ ವ್ಯರ್ಥ ಸೂಚ್ಯಂಕವು ಬಹಿರಂಗಪಡಿಸಿದೆ.
ರಿಟೇಲ್, ಆಹಾರ ಸೇವೆ ಹಾಗೂ ಮನೆಗಳ ಮಟ್ಟದಲ್ಲಿ ಬಳಕೆದಾರರಿಗೆ ಲಭ್ಯವಾಗಬೇಕಿದ್ದ ಶೇ.19ರಷ್ಟು ಆಹಾರವು ನಷ್ಟವಾಗಿ ಹೋಗಿದೆ. ಆಹಾರ ಪೂರೈಕೆ ಸರಪಣಿಯಲ್ಲಿ ಶೇ.13ರಷ್ಟು ಆಹಾರ ಪೋಲಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಘಟನೆಯ ವರದಿ ಅಂದಾಜಿಸಿರುವುದಾಗಿ ವರದಿ ತಿಳಿಸಿದೆ.
''ಆಹಾರ ವ್ಯರ್ಥವಾಗುವಿಕೆಯು ಜಾಗತಿಕ ದುರಂತವಾಗಿದೆ. ಜಗತ್ತಿನಾದ್ಯಂತ ಒಂದು ಶತಕೋಟಿಗೂ ಅಧಿಕ ಆಹಾರ ವ್ಯರ್ಥವಾಗುತ್ತಿರುವಂತೆಯೇ, ಪ್ರತಿದಿನವೂ ಕೋಟ್ಯಂತರ ಮಂದಿ ಹಸಿದ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ ಎಂದು ಯುಎನ್‌ಇಪಿ ಹೇಳಿದೆ. ಈ ಪ್ರಚಲಿತ ಸಮಸ್ಯೆಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಜೊತೆಗೆ, ಹವಾಮಾನ ಬದಲಾವಣೆ, ಜೀವವೈವಿಧ್ಯತೆಗೆ ಹಾನಿ ಹಾಗೂ ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ಯುಎನ್‌ಇಪಿಯ ಆಡಳಿತ ನಿರ್ದೇಶಕ ಇಂಗರ್ ಆಯಂಡರ್ಸನ್ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಮನೆಗಳಲ್ಲಿಯೇ ಅತ್ಯಧಿಕ ಪ್ರಮಾಣದ ಆಹಾರವು ವ್ಯರ್ಥವಾಗುತ್ತಿದ್ದು, ಅದರ ಪ್ರಮಾಣ 631 ದಶಲಕ್ಷ ಟನ್ ಗಳಾಗಿವೆ. ಆಹಾರ ಸೇವಾ ಹಾಗೂ ರಿಟೇಲ್ ವಲಯಗಳಲ್ಲಿ ಕ್ರಮವಾಗಿ 290 ಹಾಗೂ 131 ದಶಲಕ್ಷ ಟನ್ ಆಹಾ ಹಾಳಾಗಿ ಹೋಗುತ್ತಿದೆ. ಸರಾಸರಿಯಾಗಿ ಪ್ರತಿಯೊಬ್ಬ ವ್ಯಕ್ತಿಯು ವಾರ್ಷಿಕವಾಗಿ 79 ಕೆ.ಜಿ. ಆಹಾರವನ್ನು ವ್ಯರ್ಥ ಮಾಡುತ್ತಿದ್ದು, ಇದು ಹಸಿವಿನಿಂದ ಬಾಧಿತವಾಗಿರುವ ಜಗತ್ತಿನಲ್ಲಿ ಪ್ರತಿದಿನದ 1.3 ಊಟದ ಪ್ರಮಾಣಕ್ಕೆ ಸಮಾನವಾದುದಾಗಿದೆ ಎಂದು ವರದಿ ಗಮನಸೆಳೆದಿದೆ.
ಆಹಾರ ವ್ಯರ್ಥವಾಗುವಿಕೆಯ ಸಮಸ್ಯೆಯ ಕೇವಲ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಅಧಿಕ ಆದಾಯ, ಮೇಲ್ ಮಧ್ಯಮ ಆದಾಯ ಹಾಗೂ ಕೆಳ-ಮಧ್ಯಮ ಆದಾಯದ ದೇಶಗಳ ಮನೆಗಳಲ್ಲಿ ವಾರ್ಷಿಕವಾಗಿ ಸರಾಸರಿ ತಲಾ 7 ಕೆ.ಜಿ.ಯಷ್ಟು ಆಹಾರ ವ್ಯರ್ಥವಾಗುತ್ತಿದೆ.
ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ನಗರ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಆಹಾರದ ಪೋಲಾಗುವಿಕೆಯು ಕಡಿಮೆ ಪ್ರಮಾಣದಲ್ಲಿದೆ. ಪ್ರಾಣಿಗಳಿಗೆ, ಜಾನುವಾರುಗಳಿಗೆ ಹಾಗೂ ಮನೆಯ ಸಾವಯವಗೊಬ್ಬರಕ್ಕೆ ಅವುಗಳನ್ನು ಪುನರ್ಬಳಕೆ ಮಾಡುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ನಗರ ಪ್ರದೇಶಗಳಲ್ಲಿಯೂ ಆಹಾರ ವ್ಯರ್ಥವನ್ನು ಕಡಿಮೆಗೊಳಿಸಲು ಹಾಗೂ ಸಾವಯವ ಗೊಬ್ಬರ ಉತ್ಪಾದನೆಗೆ ತೀವ್ರ ಗಮನಹರಿಸಬೇಕಾಗಿದೆ ಎಂದು ವರದಿ ಶಿಫಾರಸು ಮಾಡಿದೆ. ಅಧಿಕ ತಾಪಮಾನದ ದೇಶಗಳಲ್ಲಿ ಆಹಾರ ವ್ಯರ್ಥವಾಗುವಿಕೆಯು ಪ್ರಮಾಣವು ಅಧಿಕವಾಗಿರುತ್ತದೆಯೆಂದು ವರದಿಯು ಗಮನಸೆಳೆದಿದೆ.
ಆಹಾರ ವ್ಯರ್ಥವನ್ನು ಕಡಿಮೆಗಲಿಸಲು ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯಲ್ಲಿ ಯೋಜನೆಗಳನು ರೂಪಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.