ನವದೆಹಲಿ: ದೇಶದ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ದೇಶದಲ್ಲಿ ಒಟ್ಟು 47.1 ಕೋಟಿ ಮಹಿಳೆಯರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
'ದೇಶದಲ್ಲಿ ಲಿಂಗಾನುಪಾತದ ಪ್ರಮಾಣ 1000 ಪುರುಷರಿಗೆ 948 ಮಹಿಳೆಯರಿದ್ದಾರೆ. ಲಿಂಗಾನುಪಾತವು 1000ಕ್ಕಿಂತ ಹೆಚ್ಚಿರುವ 12 ರಾಜ್ಯಗಳಿವೆ. ಅಂದರೆ ಈ ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. 1.89 ಕೋಟಿ ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 18-19 ವರ್ಷ ವಯಸ್ಸಿನವರು 85.3 ಲಕ್ಷ ಮಹಿಳಾ ಮತದಾರರಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರೂ ಸಮಾನವಾಗಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ' ಎಂದು ಅವರು ಹೇಳಿದರು.
ಮಹಿಳಾ ಮತದಾರರೇ ಅಧಿಕ ಇರುವ ರಾಜ್ಯಗಳು:
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಪುದುಚೆರಿ, ಗೋವಾ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಿಜೋರಾಂ, ದಿಯು ಮತ್ತು ದಾಮನ್
ಚುನಾವಣಾ ವೇಳಾಪಟ್ಟಿ ಪ್ರಕಟ:
ಲೋಕಸಭಾ ಚುನಾವಣೆ ಜತೆಗೆ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ.
ಮೇ 13ರಂದು ಆಂಧ್ರಪ್ರದೇಶ ಹಾಗೂ ಒಡಿಶಾ ವಿಧಾನಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಂದು ಸಿಕ್ಕಿಂ ಹಾಗೂ ಅರುಣಾಚಲ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ.
ಏಪ್ರಿಲ್ 19 ರಿಂದ 7 ಹಂತಗಳಲ್ಲಿ (ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ) ಲೋಕಸಭಾ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
2019ರ ಲೋಕಸಭೆ ಚುನಾವಣೆಯಲ್ಲಿ 7 ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು 91.2 ಕೋಟಿ ಅರ್ಹ ಮತದಾರರಿದ್ದು, ಸುಮಾರು 43.8 ಕೋಟಿ ಮಹಿಳಾ ಮತದಾರರು ಮತ್ತು ಸುಮಾರು 47.3 ಕೋಟಿ ಪುರುಷ ಮತದಾರರಿದ್ದರು.