ನವದೆಹಲಿ: ಪ್ರಕರಣವೊಂದರಲ್ಲಿ ಮಗಳ ಪಾಲನೆಯನ್ನು ತಂದೆಗೆ ನೀಡಬೇಕೆಂದು ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ತನ್ನ ಅತ್ತೆ (ತಂದೆ ತಂಗಿ) ಜತೆಗೆ ಸಂತೋಷದಿಂದಿರುವ 14 ವರ್ಷದ ಮಗುವನ್ನು ಒತ್ತೆಯಾಳಾಗಿ ಪರಿಗಣಿಸಲಾಗದು ಎಂದು ಹೇಳಿದೆ.
ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಬಾಲಕಿಯ ಸಾಕು ಅತ್ತೆ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಮಗುವಿನ ಸುರಕ್ಷತೆಯೇ ಅತ್ಯಂತ ಮುಖ್ಯವಾದುದು ಎಂದು ಹೇಳಿದೆ.
2014ರ ಮಾರ್ಚ್‌ನಲ್ಲಿ ಜನಿಸಿದ ಈ ಮಗು ಮೂರು ತಿಂಗಳ ವಯಸ್ಸಿನಿಂದಲೇ ತನ್ನ ತಂದೆಯ ಸಹೋದರಿಯೊಂದಿಗೆ ವಾಸಿಸುತ್ತಿದೆ ಎನ್ನುವ ಅಂಶವನ್ನು ಕೋರ್ಟ್ ಗಮನಿಸಿತು.
'ಇದು ಯಾವುದೇ ಪಕ್ಷಗಾರರು ದತ್ತು ಪಡೆಯಲು ಹಕ್ಕು ಸಾಧಿಸುವ ಪ್ರಕರಣವಲ್ಲ, ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲೂ ಅವಕಾಶವಿಲ್ಲ. ಪೋಷಕತ್ವವನ್ನೂ ಸಾಧಿಸಲಾಗದು. ಇದು ಮಗುವಿನ ಪಾಲನೆಗೆ ಸಂಬಂಧಿಸಿದ ವಿಷಯ ಮಾತ್ರ' ಎಂದು ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ರಾಜೇಶ್ ಬಿಂದಲ್ ಅವರ ಪೀಠ ಹೇಳಿದೆ.
ಪೀಠವು ಮಗುವಿನೊಂದಿಗೆ ಸಂವಹನ ನಡೆಸಿದೆ. ಆ ಮಗು ಪ್ರಸ್ತುತ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಿದೆ. ತನ್ನ ಸಾಕು ಅತ್ತೆಯ ಜತೆಗೆ ವಾಸಿಸುವ ಬಯಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದೆ ಎಂದು ನ್ಯಾಯಮೂರ್ತಿಗಳು ಸೋಮವಾರ ನೀಡಿದ ತೀರ್ಪಿನಲ್ಲಿ ಹೇಳಿದರು.
'ಮಗು ತನ್ನ ಅಭಿಪ್ರಾಯವನ್ನು ನೀಡುವಲ್ಲಿ ಸಮರ್ಥವಿದೆ. ಆಕೆಯ ವಯಸ್ಸನ್ನು ಗಮನದಲ್ಲಿರಿಸಿಕೊಂಡು ಆಕೆಯ ಪಾಲನೆಯ ಜವಾಬ್ದಾರಿಯನ್ನು ಪ್ರತಿವಾದಿಯಾದ ತಂದೆಗೆ ಹಸ್ತಾಂತರಿಸಲು ಆಗದು. ಬಾಲಕಿ ಹುಟ್ಟಿನಿಂದಲೂ ತನ್ನ ಸಾಕು ಅತ್ತೆಯ ಜತೆಗೆ ಇದ್ದು, ಮಗುವಿನ ಸ್ಥಿರತೆಯು ಸಹ ಅತ್ಯುನ್ನತ ಪರಿಗಣನೆಗೆ ಒಳಪಟ್ಟಿದೆ' ಎಂದು ಪೀಠ ಹೇಳಿದೆ.
ಬಾಲಕಿಯ ತಾಯಿ 2014ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ದಂಪತಿ ಇಬ್ಬರು ಶಿಶುಗಳಲ್ಲಿ ಒಂದನ್ನು ತಮ್ಮ ಬಳಿ ಇರಿಸಿಕೊಂಡು, ಈ ಬಾಲಕಿಯನ್ನು ಬೆಳೆಸಲು ಅವಳ ತಾಯಿಯ ಅಜ್ಜಿಗೆ ಒಪ್ಪಿಸಿದ್ದರು. ಅಜ್ಜಿ ಬಾಲಕಿಯನ್ನು ಮೂರು ತಿಂಗಳು ಸಲಹಿ, ನಂತರ ಬಾಲಕಿಯ ಅತ್ತೆಗೆ ಹಸ್ತಾಂತರಿಸಿದ್ದಳು.
ಈ ಅರ್ಜಿಯಲ್ಲಿನ ಪ್ರತಿವಾದಿ ಮಗುವಿನ ಪಾಲನೆಯನ್ನು ತನ್ನ ಸಹೋದರಿಗೆ ನೀಡಿದಾಗ ಆಕೆ ಅವಿವಾಹಿತೆಯಾಗಿದ್ದರು. ಆದರೆ, ಈಗ ಆಕೆಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವುದನ್ನು ಪೀಠವು ಗಮನಿಸಿತು. ಆದರೆ, ಇದನ್ನು ತನ್ನ ತೀರ್ಪಿಗೆ ಅಡ್ಡಿಯೆಂದು ಪೀಠ ಪರಿಗಣಿಸಲಿಲ್ಲ.