ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ 14ಕ್ಕಿಂತ ಕಡಿಮೆ ವಯಸ್ಸಿನವರು ಮುಂದಿನ ವರ್ಷದಿಂದ ಸಾಮಾಜಿಕ ಜಾಲತಾಣ ಸೇರುವಂತಿಲ್ಲ. ಈ ಸಂಬಂಧದ ಕಾನೂನಿಗೆ ಗವರ್ನರ್ ರಾನ್ ಡೆಸ್ಯಾಂಟಿಸ್ ಸಹಿ ಮಾಡಿದ್ದಾರೆ. 14 ವರ್ಷಕ್ಕಿಂತ ಕೆಳ ವಯಸ್ಸಿನವರ ಎಲ್ಲ ಖಾತೆಗಳನ್ನು ಕಿತ್ತುಹಾಕುವಂತೆ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಹೊಸ ಕಾನೂನಿನ ಅನ್ವಯ 14 ರಿಂದ 15 ವರ್ಷದೊಳಗಿನ ಮಕ್ಕಳು ಇನ್‍ಸ್ಟಾಗ್ರಾಂ ಮತ್ತು ಸ್ನ್ಯಾಪ್‍ಚಾಟ್‍ನಂಥ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಲು ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯ.
ಖಾತೆಯನ್ನು ಕಿತ್ತುಹಾಕಲು ಸಾಮಾಜಿಕ ಜಾಲತಾಣ ಕಂಪನಿಗಳು ವಿಫಲವಾದಲ್ಲಿ, ಮಕ್ಕಳ ಪರವಾಗಿ ದಾವೆ ಹೂಡಲಾಗುವುದು ಹಾಗೂ 10 ಸಾವಿರ ಡಾಲರ್ ವರೆಗೆ ಪರಿಹಾರವನ್ನು ಮಕ್ಕಳಿಗೆ ನೀಡಲಾಗುತ್ತದೆ. ಕಂಪನಿಗಳಿಗೆ 50 ಸಾವಿರ ಡಾಲರ್ ವರೆಗೂ ದಂಡ ವಿಧಿಸಬಹುದಾಗಿದೆ.
ಮುಂದಿನ ವರ್ಷದ ಜನವರಿಯಿಂದ ಫ್ಲೋರಿಡಾದಲ್ಲಿ ಇದು ಜಾರಿಗೆ ಬರಲಿದೆ. ಆದರೆ ಇದು ಅಮೆರಿಕದ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಜಾಲತಾಣ ಕಂಪನಿಗಳು ಈ ನಿರ್ಧಾರವನ್ನು ಪ್ರಶ್ನಿಸುವ ಸಾಧ್ಯತೆ ಇದೆ.