ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಮೀನಮಾಸ ಪೂಜೆ ಮತ್ತು ಪೈಂಕುಣಿ ಉತ್ರ ಮಹೋತ್ಸವಕ್ಕಾಗಿ ಮಾರ್ಚ್ 13 ರಂದು ಸಂಜೆ 5 ಗಂಟೆಗೆ ತೆರೆಯಲಿದೆ.
ತಂತ್ರಿವರ್ಯ ಮಹೇಶ್ ಮೋಹನರ್ ಅವರ ನೇತೃತ್ವದಲ್ಲಿ ದೇವಸ್ಥಾನದ ಮೇಲ್ಶಾಂತಿ ಪಿ.ಎನ್. ಮಹೇಶ ನಂಬೂದಿರಿ ದೇವಸ್ಥಾನದ ಗರ್ಭಗೃಹದ ಬಾಗಿಲು ತೆರೆದು ದೀಪ ಬೆಳಗಿಸುವರು.
ಬಳಿಕ ಉಪದೇವತೆಗಳಾದ ಗಣಪತಿ, ನಾಗರ ದೇವಸ್ಥಾನಗಳ ಬಾಗಿಲು ತೆರೆದು ದೀಪಗಳನ್ನು ಬೆಳಗಿಸುವರು.ಹದಿನೆಂಟನೇ ಮೆಟ್ಟಿಲು ಮುಂದಿರುವ ಹೋಮಕುಂಡದಲ್ಲಿ ಮೇಲ್ಶಾಂತಿ ಅಗ್ನಿಸ್ಪರ್ಶ ನಡೆಸಿದ ನಂತರ ಅಯ್ಯಪ್ಪ ಭಕ್ತರು ಹದಿನೆಂಟು ಮೆಟ್ಟಿಲುಗಳನ್ನು ಏರುವರು.
ಮಾಳಿಗಪ್ಪುರಂ ಸನ್ನಿಧಿಯ ಮೇಲ್ಶಾಂತಿ ಪಿ.ಜಿ.ಮುರಳಿ ನಂಬೂದಿರಿ ಮಾಳಿಗಪ್ಪುರಂ ದೇವಸ್ಥಾನದ ಬಾಗಿಲು ತೆರೆದು ದೀಪ ಬೆಳಗಿಸುವರು. .ಆರಂಭದ ದಿನ ಎರಡೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಇರುವುದಿಲ್ಲ. ಮೀನ ಮಾಸ 14 ರಂದು ಮುಂಜಾನೆ 5 ಗಂಟೆಗೆ ವಿಶೇಷ ಪೂಜಾರಂಭ ನಡೆಯಲಿದೆ.
ನಂತರ ನಿರ್ಮಾಲ್ಯ ದರ್ಶನ ಹಾಗೂ ನಿತ್ಯ ಅಭಿಷೇಕ ನಡೆಯಲಿದೆ. 5.30ಕ್ಕೆ ಗಣಪತಿ ಹೋಮ. ಬೆಳಗ್ಗೆ 5.30ರಿಂದ 7ರವರೆಗೆ ಹಾಗೂ 9ರಿಂದ 11ರವರೆಗೆ ತುಪ್ಪದ ಅಭಿಷೇಕ, 7.30ಕ್ಕೆ ಉಷಃಪೂಜೆ ನಂತರ ಉದಯಾಸ್ತಮಾನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನ ಪೂಜೆ, 1 ಗಂಟೆಗೆ ಗಭಗೃಹದ ಬಾಗಿಲು ಮುಚ್ಚಲಾಗುವುದು. ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಈ ವರ್ಷದ ಪೈಂಕುಣಿ ಉತ್ರಂ ಉತ್ಸವ 16 ರಂದು ಬೆಳಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಧ್ವಜಾರೋಹಣ ಬೆಳಿಗ್ಗೆ 8.30 ರಿಂದ 9 ರ ನಡುವೆ ನಡೆಯಲಿದೆ.
ಉತ್ಸವ ದಿನಗಳಲ್ಲಿ ಬಲಿದರ್ಶನ, ಆನೆ ಸವಾರಿ ನಡೆಯಲಿದೆ. 24ರ ರಾತ್ರಿ ಪಲ್ಲಿವೇಟ್ಟ ನಡೆಯಲಿದೆ. ಸರಂಕುತ್ತಿಯಲ್ಲಿ ಪಲ್ಲಿವೇಟ್ಟಂ (ದೇವರ ಮೃಗಬೇಟೆ) ನಡೆಯಲಿದೆ. 25ರಂದು ಬೆಳಗ್ಗೆ 9ಕ್ಕೆ ನಿರ್ಗಮನ. ರಾತ್ರಿ 11.30ರ ಸುಮಾರಿಗೆ ಪಂಬಾದಲ್ಲಿ ಆರಾಟ್ ಉತ್ಸವ ನಡೆಯಲಿದೆ. .ಅಂದು ರಾತ್ರಿ ಧ್ವಜಾವರೋಹಣ ನೆರವೇರಿಸಿ ಇತರೆ ಪೂಜೆಗಳನ್ನು ಪೂರ್ಣಗೊಳಿಸಿ ದೇಗುಲವನ್ನು ಮುಚ್ಚಲಾಗುವುದು. ಉತ್ಸವಕ್ಕೆ ಸಂಬಂಧಿಸಿದಂತೆ ಶಬರಿಮಲೆ ಸನ್ನಿಧಾನದ ವೇದಿಕೆಯಲ್ಲಿ ವಿವಿಧ ಕಲಾತ್ಮಕ ಕಾರ್ಯಕ್ರಮಗಳು ನಡೆಯಲಿವೆ.