ಗುವಾಹಟಿ: ಎರಡು ದಿನಗಳ ಅಸ್ಸಾಂ ಪ್ರವಾಸದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ₹18 ಸಾವಿರ ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಪ್ರಧಾನಿ ಮೋದಿ ಅವರು ಸುಮಾರು ₹18 ಸಾವಿರ ಕೋಟಿ ಮೊತ್ತದ ರಾಜ್ಯ ಮತ್ತು ಕೇಂದ್ರದ ಅನುದಾನಿತ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಶುಕ್ರವಾರ (ನಾಳೆ) ಮಧ್ಯಾಹ್ನ ರಾಜ್ಯಕ್ಕೆ ಆಗಮಿಸಲಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕೊಹೊರಾ ಶ್ರೇಣಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೋದಿ ಅವರಿಗಾಗಿ ಅಸ್ಸಾಂ ಸರ್ಕಾರವು ಜೀಪ್ ಮತ್ತು ಆನೆ ಸಫಾರಿಗಳನ್ನು ಆಯೋಜಿಸಿದೆ ಎಂದು ಮೋದಿ ಅವರ ಪ್ರವಾಸ ಕಾರ್ಯಕ್ರಮಗಳನ್ನು ಶರ್ಮಾ ವಿವರಿಸಿದ್ದಾರೆ.
'ಅಸ್ಸಾಂನ ಜೋರ್ಹತ್ ಜಿಲ್ಲೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು ಅಹೋಮ್ ಆರ್ಮಿ ಕಮಾಂಡರ್ ಲಚಿತ್ ಬೊರ್ಫುಕನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಪ್ರತಿಮೆಯ ಉದ್ಘಾಟನೆಯ ನಂತರ ಜೋರ್ಹತ್ ಜಿಲ್ಲೆಯ ಮೆಲೆಂಗ್‌ಗೆ ತೆರಳಲಿರುವ ಪ್ರಧಾನಿ ಮೋದಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನಿತಗೊಂಡ ಹಲವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿ ನಿರ್ಮಿಸಲಾದ 5,55,555 ಮನೆಗಳನ್ನು ಫಲಾನುಭವಿಗಳಿಗೆ ಮೋದಿ ಅವರು ಹಸ್ತಾಂತರಿಸಲಿದ್ದಾರೆ. ಇದು ದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮನೆಗಳನ್ನು ಉದ್ಘಾಟಿಸಿದ ಮಹತ್ವದ ಮೈಲಿಗಲ್ಲನ್ನು ನಿರ್ಮಿಸಲಿದೆ. ಜತೆಗೆ ತಿನ್ಸುಕಿಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದು, ಶಿವಸಾಗರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ' ಎಂದು ಸಿಎಂ ಶರ್ಮಾ ಹೇಳಿದ್ದಾರೆ.
'ಪಿಎಂ-ಡೆವಿನ್ ಯೋಜನೆಯಡಿಯಲ್ಲಿ ಗುವಾಹಟಿಯ ಡಾ. ಬಿ. ಬೊರೊವಾ ಕ್ಯಾನ್ಸರ್ ಸಂಸ್ಥೆಯಲ್ಲಿ (ಬಿಬಿಸಿಐ) ₹300 ಕೋಟಿ ವೆಚ್ಚದ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ನಂತರ ಶನಿವಾರ ಸಂಜೆ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ.