ಅಹಮದಾಬಾದ್: ಇಲ್ಲಿ ವಾಸ ಮಾಡುತ್ತಿದ್ದ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಶನಿವಾರ ಆಯೋಜಿಸಿದ್ದ ಕ್ಯಾಂಪ್‌ನಲ್ಲಿ 18 ಮಂದಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲಾಗಿದೆ. ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ ಅವರು ನಿರಾಶ್ರಿತರಿಗೆ ಪೌರತ್ವದ ದಾಖಲೆಯನ್ನು ಹಸ್ತಾಂತರಿಸಿದರು.
ಹೊಸ ಭಾರತದ ಕನಸು ನಸನು ಮಾಡಲು ಒಟ್ಟಾಗಿ ಕೆಲಸ ಮಾಡಿ ಎಂದು ಅವರು ಕರೆ ನೀಡಿದರು.
ದೇಶದ ಅಭಿವೃದ್ಧಿ ಪಯಣದಲ್ಲಿ ನೀವೆಲ್ಲರೂ ಭಾಗವಹಿಸುವ ಸಂಕಲ್ಪ ಮಾಡುತ್ತೀರಿ ಎಂದು ಭಾವಿಸುವೆ. ಭಾರತೀಯ ಪೌರತ್ವ ಪಡೆದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ ಎಂದು ಹೇಳಿದರು.
2016 ಮತ್ತು 2018ರ ಗೆಜೆಟ್ ಅಧಿಸೂಚನೆಗಳು ಗುಜರಾತ್‌ನ ಅಹಮದಾಬಾದ್, ಗಾಂಧಿನಗರ ಮತ್ತು ಕಚ್‌ನ ಜಿಲ್ಲಾಧಿಕಾರಿಗಳಿಗೆ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವವನ್ನು ನೀಡಲು ಅಧಿಕಾರ ನೀಡುತ್ತವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದರೊಂದಿಗೆ ಅಹಮದಾಬಾದ್ ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನದ ಒಟ್ಟು 1,167 ಹಿಂದೂ ನಿರಾಶ್ರಿತರಿಗೆ ಇದುವರೆಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅದು ಹೇಳಿದೆ.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಭಾರತೀಯ ಪೌರತ್ವವನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಸಾಂಘವಿ ಹೇಳಿದರು.