HEALTH TIPS

ಭಾರತ್ ಜೊಡೊ ಯಾತ್ರೆ: ರಾಹುಲ್‌ರನ್ನು ಮುನ್ನೆಲೆಗೆ ತರುವ 19ನೇ ಪ್ರಯತ್ನ: ರಿಜಿಜು

             ವದೆಹಲಿ: 'ನಿಮ್ಮನ್ನು ಪ್ರತಿ ಬಾರಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದಾಗಲೂ ಕಾಂಗ್ರೆಸ್‌ ಪರಾಭವಗೊಂಡಿದೆ. ಭಾರತ ಜೋಡೊ ನ್ಯಾಯ ಯಾತ್ರೆಯೂ ಇಂಥ 19ನೇ ಪ್ರಯತ್ನವಾಗಿದೆ. ಹೀಗಾಗಿ ಸಾಮರ್ಥ್ಯ ಮೀರಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ಕೈಬಿಡಬೇಕು' ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಲಹೆ ನೀಡಿದ್ದಾರೆ.

               ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದು, 'ಗಾಂಧಿ ಕುಟುಂಬದ ಕುಡಿಯನ್ನು ಮುನ್ನೆಲೆಗೆ ತರುವ ಎಲ್ಲಾ ಪ್ರಯತ್ನಗಳೂ ಆ ಪಕ್ಷಕ್ಕೆ ನಷ್ಟವನ್ನುಂಟು ಮಾಡಿವೆ. ಹೀಗಾಗಿ ತಮ್ಮ ಸಹೋದ್ಯೋಗಿಗಳು ಮತ್ತು ಪಕ್ಷದ ಅಮೂಲ್ಯ ಸಮಯವನ್ನು ಹಾಳು ಮಾಡದೇ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸವನ್ನು ಮಾಡುವುದು ಸೂಕ್ತ' ಎಂದಿದ್ದಾರೆ.

               'ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಹೊಂದಿರುವ ದ್ವೇಷದ ಪ್ರಮಾಣವನ್ನು ಅಳೆಯಲೂ ಆಗದು ಮತ್ತು ವಿವರಿಸಲೂ ಸಾಧ್ಯವಿಲ್ಲ. ಇದರೊಂದಿಗೆ ಕಾಂಗ್ರೆಸ್ ನಾಯಕರೂ ಹಿಂದೂ ಸಂಸ್ಕೃತಿಯನ್ನೇ ವಿರೋಧಿಸುವವರು. ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ವ್ಯಕ್ತಿಯನ್ನು ನಾಯಕನನ್ನಾಗಿ ಪರಿಚಯಿಸಲು 2ನೇ ಅವಕಾಶ ಸಿಕ್ಕ ಉದಾಹರಣೆಗಳಿಲ್ಲ. ಆದರೆ ರಾಹುಲ್ ಗಾಂಧಿಯನ್ನು 19ನೇ ಬಾರಿ ಮುನ್ನೆಲೆಗೆ ತರುವ ಪ್ರಯತ್ನ ಮಾಡಲಾಗಿದೆ. ಇಂಥ ಪ್ರಯತ್ನ ಇನ್ನೂ ಎಷ್ಟು ಬಾರಿ ನಡೆಯಲಿದೆ' ಎಂದು ರಿಜಿಜು ಪ್ರಶ್ನಿಸಿದ್ದಾರೆ.

              'ಹಿಂದೂ ಧರ್ಮ ಹಾಗೂ ಹಿಂದುತ್ವವನ್ನು ಸದಾ ವಿರೋಧಿಸಿದವರು ಅವರು. ಅವರ ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಉಲ್ಲೇಖಿಸಿತ್ತು. ಇದು ಆ ಪಕ್ಷದವರ ಆಲೋಚನಾ ಕ್ರಮವಾಗಿದ್ದು, ಅದು ಈಗ ಇಡೀ ಜಗತ್ತಿಗೇ ತಿಳಿದಿದೆ. ಹೀಗಾಗಿ ಅವರು ಏನೇ ಹೇಳಿಕೆ ನೀಡಿದರೂ ಅದು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ವಿರುದ್ಧವೇ ಆಗಿರುತ್ತದೆ. ಜತೆಗೆ ದೇಶ ವಿರೋಧಿ ಗುಂಪಿನ ಪ್ರಾಯೋಜಕತ್ವವೂ ಅವರಿಗಿದೆ. ವಿದೇಶಗಳಲ್ಲೂ ದೇಶದ ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಅವಹೇಳನ ಮಾಡುತ್ತಲೇ ಬಂದಿದ್ದಾರೆ' ಎಂದು ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡಿದರು.

                  'ಭಾರತದ ಸಂಸ್ಕೃತಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಸದಾ ವಿಷ ಕಾರುತ್ತಲೇ ಇರುತ್ತಾರೆ. ಅಮೆರಿಕ ಅಥವಾ ಇಂಗ್ಲೆಂಡ್ ಅಥವಾ ಇನ್ಯಾವುದೇ ದೇಶಕ್ಕೆ ಭೇಟಿ ನೀಡಿದರೂ ಭಾರತ ವಿರೋಧಿ ಗುಂಪುಗಳು ಇವರ ಪ್ರವಾಸವನ್ನು ಪ್ರಾಯೋಜಿಸುತ್ತವೆ. ಅದಕ್ಕೆ ತಕ್ಕಂತೆ ಇವರೂ ಭಾರತೀಯ ಸಂಸ್ಕೃತಿ ವಿರುದ್ಧ ಮಾತನಾಡುತ್ತಾರೆ. ಭಾರತದ ಚಿತ್ರಣವನ್ನೇ ನಾಶ ಮಾಡುತ್ತಿದ್ದಾರೆ. ಇಷ್ಟೊಂದು ದ್ವೇಷ ತುಂಬಿರುವ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ' ಎಂದು ರಿಜಿಜು ವಾಗ್ದಾಳಿ ನಡೆಸಿದ್ದಾರೆ.

               'ನರೇಂದ್ರ ಮೋದಿ ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಚುನಾಯಿತ ನಾಯಕ. ಜಾಗತಿಕ ನಾಯಕತ್ವವನ್ನೂ ನಿಭಾಯಿಸುತ್ತಿರುವ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ. ಈ ಎಲ್ಲಾ ಕಾರಣಕ್ಕಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಜನರೇ ಬಯಸುತ್ತಿದ್ದಾರೆ' ಎಂದು ರಿಜಿಜು ಆಶಾಭಾವ ವ್ಯಕ್ತಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries