ಉಜ್ಜಯಿನಿ: ಮಧ್ಯಪ್ರದೇಶದ ಮಹಾಕಾಳೇಶ್ವರ ದೇಗುಲದಲ್ಲಿ ಭಸ್ಮ ಆರತಿ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಮತ್ತು ₹1 ಲಕ್ಷ ನೆರವನ್ನು ನೀಡಲಾಗುವುದು. ಅಲ್ಲದೆ ಈ ರೀತಿಯ ಘಟನೆ ಮರುಕಳಿಸದಂತೆ ಆಡಳಿತವು ಮುನ್ನೆಚ್ಚರಿಕೆವಹಿಸಲಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಭೋಪಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಳಿ ಬಣ್ಣಗಳಿಂದ ರಕ್ಷಿಸಲು ಗರ್ಭಗುಡಿಯ ಬೆಳ್ಳಿಯ ಗೋಡೆಗಳ ಮೇಲೆ ಬಟ್ಟೆಗಳನ್ನು ಹಾಕಲಾಗಿತ್ತು. 'ಗುಲಾಲ್' ಆರತಿ ತಟ್ಟೆಯ ಮೇಲೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಗುಲಾಲ್‌ನಲ್ಲಿನ ರಾಸಾಯನಿಕಗಳ ಪ್ರತಿಕ್ರಿಯೆಯಿಂದ ಬೆಂಕಿ ಕಾಣಿಸಿಕೊಂಡಿದೆಯೇ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವುದು ಆದ್ಯತೆಯ ಕೆಲಸವಾಗಿದೆ. ದೇವಾಲಯದೊಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ಪರೀಕ್ಷಿಸಲು ಆದೇಶಿಸಲಾಗಿದೆ ಎಂದು ಹೇಳಿದರು.
ಬಣ್ಣದ ಪುಡಿಯಿಂದ ಹೊತ್ತಿಕೊಂಡ ಬೆಂಕಿ
ಬೆಳಿಗ್ಗೆ 5.50ರ ವೇಳೆ ಗರ್ಭಗುಡಿಯಲ್ಲಿ ಭಸ್ಮ ಆರತಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಆರತಿ ಮಾಡುವ ವೇಳೆ ಕರ್ಪೂರ ಇರುವ ಪೂಜೆಯ ಬಟ್ಟಲಿನ ಮೇಲೆ 'ಗುಲಾಲ್' (ಹೋಳಿ ಆಚರಣೆಗಳಲ್ಲಿ ಬಳಸುವ ಬಣ್ಣದ ಪುಡಿ) ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡ 14 ಅರ್ಚಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಜಿಲ್ಲಾ ಪಂಚಾಯತ್ ಸಿಇಒ ಮೃಣಾಲ್ ಮೀನಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅನುಕೂಲ್ ಜೈನ್ ನೇತೃತ್ವದಲ್ಲಿ ಮೂರು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.