ಇಟಾನಗರ: ನಮ್ಮ ಸರ್ಕಾರವು ಈಶಾನ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಾಂಗ್ರೆಸ್ ಪಕ್ಷವು 20 ವರ್ಷ ತೆಗೆದುಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೂರಿದರು.
ಅರುಣಾಚಲ ಪ್ರದೇಶದಲ್ಲಿ ₹55,600 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ, 'ವಿಕಾಸ್ ಭಾರತ ವಿಕಸಿತ ಈಶಾನ್ಯ' ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯಾ ನಂತರದಿಂದ 2014ರವರೆಗೆ ಈಶಾನ್ಯದಲ್ಲಿ ಕೇವಲ 10,000 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಆದರೆ ಕಳೆದ ಹತ್ತು ವರ್ಷದಲ್ಲಿ 6,000 ಕಿ.ಮೀ ಗೂ ಹೆಚ್ಚು ಉದ್ದದ ಹೆದ್ದಾರಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷವು ಏಳು ದಶಕಗಳಲ್ಲಿ ಮಾಡಿದ ಕೆಲಸವನ್ನು ನಾವು ಕೇವಲ ಒಂದು ದಶಕದಲ್ಲಿ ಮಾಡಿದ್ದೇವೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ, ಪೂರ್ವಾ ಏಷ್ಯಾದೊಂದಿಗಿನ ಭಾರತದ ವಾಣಿಜ್ಯ ವ್ಯವಹಾರ, ಪ್ರವಾಸೋದ್ಯಮ ಮತ್ತಿತರ ಸಂಬಂಧಗಳಲ್ಲಿ ಈಶಾನ್ಯವು ಬಹು ಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.
'ಮೋದಿ ಗ್ಯಾರಂಟಿ ಎಂದರೆ ಏನು ಎಂದು ಇಲ್ಲಿ ಬಂದು ನೋಡಿದ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಅರ್ಥವಾಗಲಿದೆ. ಮೋದಿ ಗ್ಯಾರಂಟಿ ಹೇಗೆ ಕಾಯ್ಪತತ್ಪರವಾಗಿದೆ ಎಂದು ಇಡೀ ಈಶಾನ್ಯದ ಜನತೆ ನೋಡುತ್ತಿದ್ದಾರೆ' ಎಂದರು.
'ಪ್ರಧಾನಿಯಾಗಿ ದೇಶದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ವಿರೋಧ ಪಕ್ಷಗಳ ಒಕ್ಕೂಟವಾದ 'ಇಂಡಿಯಾ' ನನ್ನ ವಿರುದ್ಧ 'ಆಕ್ರಮಣ'ದಲ್ಲಿ ನಿರತವಾಗಿದೆ' ಎಂದು ದೂರಿದರು.
ತವಾಂಗ್ ಸಂಪರ್ಕಿಸುವ ಸೇಲಾ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, '2019ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಸುರಂಗ ಈಗ ಉದ್ಘಾಟನೆಯಾಗುತ್ತಿರುವುದು ಮೋದಿ ಗ್ಯಾರಂಟಿಯ ಪ್ರಾಮಾಣಿಕತೆಗೆ ಸಾಕ್ಷಿ. ಚುನಾವಣೆ ಉದ್ದೇಶದಿಂದ ಶಂಕುಸ್ಥಾಪನೆ ಮಾಡುತ್ತಿರುವುದಾಗಿ ಕೆಲವರು ಭಾವಿಸಿದ್ದರು. ಆದರೆ ಅವರ ಊಹೆ ತಪ್ಪೆಂದು ಇಂದು ಸಾಬೀತಾಗಿದೆ' ಎಂದು ಹೇಳಿದರು.