ನವದೆಹಲಿ :ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜ್ಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ 2003ರ ನಂತರ ಸೇರಿಸಲಾಗಿರುವ ವಸ್ತುಗಳನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗಿಡುವಂತೆ ಕಮಲ್ ಮೌಲಾ ಮಸೀದಿ ಕಲ್ಯಾಣ ಸಮಾಜವು ಶನಿವಾರ ಭಾರತೀಯ ಪುರಾತತ್ವ ಇಲಾಖೆಯನ್ನು ಒತ್ತಾಯಿಸಿದೆ.
ನವದೆಹಲಿ :ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜ್ಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ 2003ರ ನಂತರ ಸೇರಿಸಲಾಗಿರುವ ವಸ್ತುಗಳನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗಿಡುವಂತೆ ಕಮಲ್ ಮೌಲಾ ಮಸೀದಿ ಕಲ್ಯಾಣ ಸಮಾಜವು ಶನಿವಾರ ಭಾರತೀಯ ಪುರಾತತ್ವ ಇಲಾಖೆಯನ್ನು ಒತ್ತಾಯಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ಮಾರ್ಚ್ 11ರಂದು ನೀಡಿದ ಆದೇಶದ ಅನ್ವಯ, ಭಾರತೀಯ ಪುರಾತತ್ವ ಇಲಾಖೆಯು ಶುಕ್ರವಾರ ಮಂದಿರ-ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಆರಂಭಿಸಿದೆ.
''ಹಿಂದೂ ಫ್ರಂಟ್ ಫಾರ್ ಜಸ್ಟೀಸ್'' ಎಂಬ ಹೆಸರಿನ ಗುಂಪೊಂದು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಸಂಕೀರ್ಣದ ಸಮೀಕ್ಷೆ ನಡೆಸುವಂತೆ ಆದೇಶ ನೀಡಿತ್ತು. ಹಿಂದೂ ದೇವಾಲಯಗಳನ್ನು ''ಧ್ವಂಸಗೊಳಿಸಿ'' ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆ ಗುಂಪು ಆರೋಪಿಸಿತ್ತು.
ಭಾರತೀಯ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿರುವ 11ನೇ ಶತಮಾನದ ಈ ಕಟ್ಟಡವು ತಮಗೆ ಸೇರಿದ್ದೆಂದು ಹಿಂದೂಗಳು ಮತ್ತು ಮುಸ್ಲಿಮರು ಹೇಳುತ್ತಿದ್ದಾರೆ. ಭೋಜ್ಶಾಲಾವು ಸರಸ್ವತಿ ದೇವಿಯ ದೇವಸ್ಥಾನ ಎಂಬುದಾಗಿ ಹಿಂದೂಗಳು ಭಾವಿಸಿದರೆ, ಮುಸ್ಲಿಮ್ ಸಮುದಾಯವು ಈ ಕಟ್ಟಡವನ್ನು ಮಸೀದಿ ಎಂಬುದಾಗಿ ಪರಿಗಣಿಸಿದೆ.
2003 ಎಪ್ರಿಲ್ 7ರಂದು ಭಾರತೀಯ ಪುರಾತತ್ವ ಇಲಾಖೆಯ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ ಒಡಂಬಡಿಕೆಯನ್ವಯ, ಈ ಕಟ್ಟಡದ ಆವರಣದಲ್ಲಿ ಹಿಂದೂಗಳು ಮಂಗಳವಾರಗಳಂದು ಪೂಜೆ ಮಾಡುತ್ತಾರೆ ಮತ್ತು ಮುಸ್ಲಿಮರು ಶುಕ್ರವಾರಗಳಂದು ನಮಾಝ್ ಮಾಡುತ್ತಾರೆ.
ನನ್ನ ಆಕ್ಷೇಪಗಳನ್ನು ಭಾರತೀಯ ಪುರಾತತ್ವ ಇಲಾಖೆಗೆ ಇಮೇಲ್ ಮೂಲಕ ಕಳುಹಿಸಿದ್ದೇನೆ ಎಂದು ಶನಿವಾರ ಕಮಲ್ ಮೌಲಾ ಮಸೀದಿ ಕಲ್ಯಾಣ ಸಮಾಜದ ಅಧ್ಯಕ್ಷ ಅಬ್ದುಲ್ ಸಮದ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ಪ್ರಮುಖ ಪಕ್ಷಗಳ ಪೈಕಿ ಒಂದಾಗಿದ್ದಾರೆ.
''2003ರ ಬಳಿಕ ಭೋಜ್ಶಾಲಾದ ಒಳಗೆ ಸೇರ್ಪಡೆಗೊಳಿಸಲಾಗಿರುವ ವಸ್ತುಗಳನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವುದು ನಮ್ಮ ಮುಖ್ಯ ಬೇಡಿಕೆಯಾಗಿದೆ'' ಎಂದು ಅವರು ತಿಳಿಸಿದರು.