ಪ್ರಯಾಗ್‌ರಾಜ್: 2004ರಲ್ಲಿ ಜಾರಿಗೆ ಬಂದ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆಯು ಸಂವಿಧಾನಬಾಹಿರ ಎಂದು ಕರೆದಿರುವ ಅಲಹಾಬಾದ್ ಹೈಕೋರ್ಟ್, ಇದು ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು ಎಂದು ಅಭಿಪ್ರಾಯಪಟ್ಟಿದೆ.
ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ, 'ಈ ಕಾನೂನು ಅಧಿಕಾರ ವ್ಯಾಪ್ತಿಯನ್ನೂ ಮೀರಿ ರಚಿಸಿದಂತಿದೆ.
ಹೀಗಾಗಿ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ಶಿಕ್ಷಣ ವ್ಯವಸ್ಥೆಯ ಶಾಲೆಗಳಿಗೆ ಸೇರಿಸಬೇಕು' ಎಂದೂ ಪೀಠ ನಿರ್ದೇಶನ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಮೂಲಕ ನಿರ್ವಹಣೆಗೊಳ್ಳುವ ಮದರಸಾಗಳು ಅಸಂವಿಧಾನಿಕ ಎಂದು ಅನ್ಶುಮನ್ ಸಿಂಗ್ ರಾಥೋಡ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿವೇಕ ಚೌಧರಿ ಹಾಗೂ ನ್ಯಾ. ಸುಭಾಶ್ ವಿದ್ಯಾರ್ಥಿ ಅವರಿದ್ದ ವಿಭಾಗೀಯ ಪೀಠವು ಈ ನಿರ್ದೇಶನ ನೀಡಿದೆ.
'ಉತ್ತರ ಪ್ರದೇಶದಲ್ಲಿ ಮದರಸಾಗಳ ಸಂಖ್ಯೆ ದೊಡ್ಡದಿದೆ. ಜತೆಗೆ ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಸರ್ಕಾರದ ಪ್ರಾಥಮಿಕ ಶಿಕ್ಷಣ ಮಂಡಳಿ ಮತ್ತು ಪ್ರೌಢಶಾಲೆ ಹಾಗೂ ಮಾಧ್ಯಮಿಕ ಅಂಗೀಕೃತ ಶಾಲೆಗಳಿಗೆ ಈ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಹೆಚ್ಚುವರಿ ಸೀಟುಗಳು ಬೇಕಿದ್ದರೂ, ಅದನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ' ಎಂದು ಪೀಠ ಹೇಳಿದೆ.
'6ರಿಂದ 14 ವರ್ಷದೊಳಗಿನ ಯಾವುದೇ ಮಕ್ಕಳು ಅಂಗೀಕೃತ ಸಂಸ್ಥೆಗಳಲ್ಲಿ ದಾಖಲಾಗುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು. ಮದರಸಾ ಕಾಯ್ದೆ 2004 ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾಗಿದೆ. ಸಂವಿಧಾನದ 14, 21 ಹಾಗೂ 21-ಎ ಅಡಿಯಲ್ಲಿ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ಕಾಯ್ದೆಯೂ ಅಸಂವಿಧಾನಿಕ ಎಂದು ಘೋಷಿಸಲಾಗಿದೆ' ಎಂದು ಪೀಠ ಹೇಳಿದೆ.