ಲಖನೌ: 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು 'ಇಂಡಿಯಾ' ಮೈತ್ರಿ ಕೂಟದ ಸಮಾಜವಾದಿ ಪಕ್ಷ (ಎಸ್‌ಪಿ)- ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟಿದ್ದು, ಕೆಲವೆಡೆ ಬಿಎಸ್‌ಪಿ ತ್ರಿಕೋನ ಸ್ಪರ್ಧೆವೊಡ್ಡಬಹುದು ಎಂದು ವಿಶ್ಲೇಷಿಸಲಾಗಿದೆ.
ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಹೊಂದಿರುವ ಬಿಜೆಪಿ, ಇದನ್ನು ನನಸು ಮಾಡಿಕೊಳ್ಳಲು ಪ್ರಮುಖವಾಗಿ ಉತ್ತರ ಪ್ರದೇಶವನ್ನು ನೆಚ್ಚಿಕೊಂಡಿದೆ. ಕೇಸರಿ ಪಕ್ಷದ ಓಟಕ್ಕೆ ತಡೆ ನೀಡಲು 'ಇಂಡಿಯಾ' ಮೈತ್ರಿಕೂಟವೂ ಸಾಕಷ್ಟು ಕಸರತ್ತಿನಲ್ಲಿ ತೊಡಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 62 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಯು, ಈಗಾಗಲೇ 51 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ, ಪ್ರತಿಸ್ಪರ್ಧಿ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಪಕ್ಷವು ತನ್ನ ಮೈತ್ರಿ ಪಕ್ಷಗಳಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ನಿಶಾದ್ ಪಾರ್ಟಿ, ಅಪ್ನಾದಳ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷಗಳಿಗೆ (ಎಸ್‌ಬಿಎಸ್‌ಪಿ) ಆರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.
ಯೋಗಿ ಹೆಗಲಿಗೆ ಗೆಲ್ಲಿಸುವ ಹೊಣೆ: ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ ಎಲ್ಲ ಸ್ಥಾನಗಳನ್ನು ಗೆಲ್ಲಿಸುವ ಹೊಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಹಿಸಲಾಗಿದೆ. ಶನಿವಾರ ಚುನಾವಣಾ ದಿನಾಂಕಗಳು ಪ್ರಕಟಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದ್ದು, ಸಾರ್ವಜನಿಕ ರ‍್ಯಾಲಿಗಳಲ್ಲಿಯೂ ಚುನಾವಣಾ ಪ್ರಚಾರದ ಕಹಳೆ ಊದಿದ್ದಾರೆ.
ರಾಮಮಂದಿರ ಉದ್ಘಾಟನೆಯಿಂದಾಗಿ ರಾಜ್ಯ ಮತ್ತು ದೇಶದಲ್ಲಿ ತನ್ನ ಪರವಾದ ಅಲೆ ಎದ್ದಿದೆ ಎಂದು ಕೇಸರಿ ಪಕ್ಷ ಭಾವಿಸಿದೆ. 'ರಾಮನ ಆಶೀರ್ವಾದದಿಂದ ಉತ್ತರ ಪ್ರದೇಶದ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ' ಎಂದು ಪಕ್ಷದ ಹಿರಿಯ ನಾಯಕ ವಿಜಯ್ ಬಹದ್ದೂರ್ ಪಾಠಕ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ರಾಜ್ಯದಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು ಶೇ 42ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಆದರೆ ರಾಜ್ಯದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಲ್ಲಿನ ಎಸ್.ಪಿ ಭದ್ರಕೋಟೆಗಳನ್ನು ಭೇದಿಸಲು ಅದಕ್ಕೆ ಆಗಿರಲಿಲ್ಲ. ಈ ಬಾರಿ ಬಿಜೆಪಿಯು ಪಶ್ಚಿಮ ಜಿಲ್ಲೆಗಳಲ್ಲಿ ಜಾಟ್ ಸಮುದಾಯದ ಪ್ರಬಲ ನಾಯಕರನ್ನು ಹೊಂದಿರುವ ಆರ್‌ಎಲ್‌ಡಿ ಜತೆ ಮೈತ್ರಿ ಮಾಡಿಕೊಂಡಿದೆ.
ಸಮಾಜವಾದಿ ಪಕ್ಷದ ಕಾರ್ಯಕರ್ತರುಎಸ್.ಪಿ-ಬಿಎಸ್‌ಪಿ ಸ್ಪರ್ಧೆ ಬಿಜೆಪಿಗೆ ಅನುಕೂಲ
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ಈ ಪಕ್ಷಗಳು ಒಟ್ಟು 15 ಕ್ಷೇತ್ರಗಳನ್ನು ಗೆದ್ದಿದ್ದವು ಮತ್ತು 10ಕ್ಕೂ ಹೆಚ್ಚು ಕಡೆ ಬಿಜೆಪಿಗೆ ಕಠಿಣ ಸ್ಪರ್ಧೆ ನೀಡಿದ್ದವು. ಆದರೆ ಈ ಬಾರಿ ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಕಣಕ್ಕಿಳಿಯಲಿರುವುದು ಬಿಜೆಪಿಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಶೇ 32ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಮತಗಳ ಪಾಲು ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ನಡೆಸಿದೆ. 'ಪ್ರಶ್ನೆ ಪತ್ರಿಕೆ ಸೋರಿಕೆ ಹಳೆ ಪಿಂಚಣಿ ಯೋಜನೆ ರೈತರ ಸಮಸ್ಯೆಗಳು ಮತ್ತು ಹಣದುಬ್ಬರದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜವಾದಿ ಪಕ್ಷವು ಬಿಜೆಪಿಯನ್ನು ಎದುರಿಸಲಿದೆ' ಎಂದು ಎಸ್‌ಪಿ ನಾಯಕ ರಾಜೇಂದ್ರ ಚೌಧರಿ ಪ್ರತಿಕ್ರಿಯಿಸಿದ್ದಾರೆ.
2017ರ ವಿಧಾನಸಭಾ ಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದಿದ್ದ ಬಿಎಸ್‌ಪಿ 2022ರಲ್ಲಿ ಕೇವಲ ಒಂದು ಸ್ಥಾನ ಗೆದ್ದು ಕಳಪೆ ಸಾಧನೆ ತೋರಿತ್ತು. ಬಿಎಸ್‌ಪಿ ಅಭ್ಯರ್ಥಿಗಳು ಪ್ರಮುಖವಾಗಿರುವೆಡೆ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಎದುರಾಗಬಹುದು ಎಂದು ಮೂಲಗಳು ತಿಳಿಸಿವೆ.