ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು, ಇಲ್ಲಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ಇತ್ತೀಚಿಗೆ ಲಕ್ಷ್ಮೀ ವಿ ಭಟ್ ಮಂಜೇಶ್ವರ ರಚಯಿತ ಅಷ್ಟದ್ರವ್ಯ ಹಾಗೂ ಝೇಂಕಾರ ಕೃತಿಗಳನ್ನು ಸಾನಿಧ್ಯ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಡಾ. ಧನಂಜಯ ಕುಂಬ್ಳೆ ಅಷ್ಟದ್ರವ್ಯವನ್ನು ಲೋಕಾರ್ಪಣೆಗೈದು ಕೃತಿ ಅವಲೋಕನ ನಡೆಸಿ, ಈ ಕೃತಿಯು ಹೊಸ ಬರೆಹಗಾರರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಸಾಹಿತ್ಯಾಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಈ ಕೃತಿಯೇ ಒಂದು ಪಠ್ಯಪುಸ್ತಕವಿದ್ದಂತೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅವರು ಝೇಂಕಾರ ಕೃತಿಯನ್ನು ಲೋಕಾರ್ಪಣೆಗೈದು, ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದು ಬಣ್ಣಿಸಿದರು.
ಡಾ. ಮೀನಾಕ್ಷಿ ರಾಮಚಂದ್ರ ಇವರು ಝೇಂಕಾರ ಕೃತಿ ಅವಲೋಕನ ಮಾಡಿ, ತ್ರಿಪದಿಗಳು ಮಹಿಳೆಯರ ಗಾಯತ್ರಿ ಎಂಬುದು ಮತ್ತೊಮ್ಮೆ ಲಕ್ಷ್ಮಿಯ ಮೂಲಕ ಸಾಬೀತಾಯಿತು. ಕನ್ನಡ ನೆಲದ ಜನಮಾನಸದಲ್ಲಿ ಹಾಸು ಹೊಕ್ಕಾಗಿ ಬೆಳೆದಿರುವ ಸಾಹಿತ್ಯ ತ್ರಿಪದಿಗಳು. ಈ ಕೃತಿಯಲ್ಲಿ ಹಲವು ವೈವಿಧ್ಯ ವಿಚಾರಗಳ ಅನಾವರಣವನ್ನು ಕಾಣಬಹುದು. ಕಾಸರಗೋಡಿನ ಕನ್ನಡಿಗರಲ್ಲಿ ಕನ್ನಡದ ರಕ್ತ ಬಿರುಸಾಗಿ ಹರಿಯುತ್ತಿದೆ ಎಂದು ನುಡಿದರು.
ಬಳಿಕ ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಇವರು ಛಂದೋಬದ್ಧ ಕವಿತೆಗಳು;ಆಧುನಿಕ ಪ್ರಯೋಗ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಅನುಷಾ ಕೊಲ್ಲರಮಜಲು , ಪ್ರಸನ್ನಾ ಸಿ ಎಸ್ ಭಟ್ ಕಾಕುಂಜೆ ಹಾಗೂ ದಿವಾಕರ್ ಬಲ್ಲಾಳ ಇವರು ಸುಮಧುರವಾಗಿ ಹಾಡಿದರು.
ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ರಾಧಾಕೃಷ್ಣ ಕೆ.ಉಳಿಯತಡ್ಕ ಅಧ್ಯಕ್ಷತೆ ವಹಿಸಿದ್ದರು. ಡಾ. ಸುರೇಶ ನೆಗಳಗುಳಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸತ್ಯವತಿ ಭಟ್ ಕೊಳಚಪ್ಪು, ಗುಣಾಜೆ ರಾಮಚಂದ್ರ ಭಟ್, ಯೋಗೀಶ್ ರಾವ್ ಚಿಗುರುಪಾದೆ , ಡಾ. ದಿನೇಶ್ ನಾಯಕ್, ಎಡ್ವರ್ಡ್ ಲೋಬೋ, ಪ್ರಮೀಳಾ ಚುಳ್ಳಿಕಾನ, ಪ್ರವೀಣ್ ಅಮ್ಮೆಂಬಳ, ವೆಂಕಟ ಭಟ್ ಎಡನೀರು, ಗೋಪಾಲಕೃಷ್ಣ ಶಾಸ್ತ್ರಿ, ಸಾವಿತ್ರಿ ರಮೇಶ ಭಟ್ ಮೊದಲಾದವರು ಕವನ ವಾಚನ ಮಾಡಿದರು. ಅನೂಷ ಕೊಲ್ಲರಮಜಲು ಪ್ರಾರ್ಥಿಸಿದರು. ಲಕ್ಷ್ಮೀ ವಿ ಭಟ್ ಸ್ವಾಗತಿಸಿ, ದಿವಾಕರ ಬಲ್ಲಾಳ್ ನಿರೂಪಿಸಿದರು. ಸಂತ ಅಲೋಶಿಯಸ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಕೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.