ಅಮರಾವತಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಸಂಜೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಮೊದಲ ಚುನಾವಣಾ ರ್‍ಯಾಲಿ ಆರಂಭಿಸಲಿದ್ದಾರೆ.
ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರೊಂದಿಗೆ ಪ್ರಧಾನಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
'ಪ್ರಜಾಗಳಂ' ಎಂದು ಹೆಸರಿಸಲಾಗಿರುವ ಈ ರ್‍ಯಾಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಡಿಎ ಮೈತ್ರಿಕೂಟದ ಮೊದಲ ಸಾರ್ವಜನಿಕ ಸಭೆಯಾಗಿದೆ.
'ಆಂಧ್ರಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ಕ್ರೂರ ರಾಜಕಾರಣವನ್ನು ಅಂತ್ಯಗೊಳಿಸುವ ಗುರಿಯನ್ನು ಪ್ರಜಾಗಳಂ ಹೊಂದಿದೆ' ಎಂದು ಜನಸೇನೆ ಹೇಳಿದೆ. ಸಭೆಯಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಬಿಜೆಪಿ, ಜನಸೇನಾ ಮತ್ತು ಟಿಡಿಪಿ ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿವೆ ಎಂದು ನಾಯ್ಡು ಹಿಂದೆ ಹೇಳಿದ್ದರು.
ಬಿಜೆಪಿ 6 ಲೋಕಸಭಾ ಮತ್ತು 10 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಟಿಡಿಪಿ 17 ಲೋಕಸಭಾ ಮತ್ತು 144 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಪವನ್ ಕಲ್ಯಾಣ್ ಅವರ ಜನಸೇನಾ 2 ಲೋಕಸಭಾ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ನಾಯ್ಡು ಅವರು ವಿಧಾನಸಭೆ ಚುನಾವಣೆಗೆ 128 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಇನ್ನೂ 16 ಅಭ್ಯರ್ಥಿಗಳ ಹೆಸರು ಬಾಕಿ ಉಳಿದಿವೆ.
ಜನಸೇನಾ ಇದುವರೆಗೆ 7 ಅಭ್ಯರ್ಥಿಗಳನ್ನು ಘೋಷಿಸಿದ್ದು, ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ.
ಟಿಡಿಪಿ ಹಂಚಿಕೊಂಡ ಮಾಹಿತಿ ಪ್ರಕಾರ, ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ಸಂಜೆ 4.10ಕ್ಕೆ ಗನ್ನಾವರಂ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ.
ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪಲ್ನಾಡು ಜಿಲ್ಲೆಗೆ ಆಗಮಿಸಲಿದ್ದು , ಸಂಜೆ 5 ಗಂಟೆ ಸುಮಾರಿಗೆ ಬೊಪ್ಪುಡಿ ಗ್ರಾಮದಲ್ಲಿರುವ ಆಯೋಜಿಸಲಾಗಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ರಿಂದ 6 ಗಂಟೆಯವರೆಗೆ ಪ್ರಧಾನಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಲಿದ್ದು , ಬಳಿಕ ಹೈದರಾಬಾದ್‌ಗೆ ತೆರಳಲಿದ್ದಾರೆ.