ನವದೆಹಲಿ: ಗಲ್ಫ್ ಆಫ್ ಏಡನ್‌ನಲ್ಲಿ ಸಾಗುತ್ತಿದ್ದ ಬಾರ್ಬಾಡೋಸ್ ಮಾಲೀಕತ್ವದ ಸರಕು ಸಾಗಣೆ ಹಡಗಿನ ಮೇಲೆ ನಡೆದ ಹೌತಿ ಭಯೋತ್ಪಾದಕರು ನಡೆಸಿದ ಕ್ಷಿಪಣಿ ದಾಳಿಗೆ ಸಿಲುಕಿದ ಒಬ್ಬ ಭಾರತೀಯನನ್ನೂ ಒಳಗೊಂಡ 21 ಜನರನ್ನು ಭಾರತದ ಯುದ್ಧನೌಕೆ ಐಎನ್‌ಎಸ್ ಕೊಲ್ಕತ್ತ ರಕ್ಷಿಸಿದೆ.
ಇಸ್ರೇಲ್ ಮಿಲಿಟರಿ ದಾಳಿಗೆ ಪ್ರತಿಯಾಗಿ ಹೌತಿ ಭಯೋತ್ಪಾದಕರು ನಡೆಸಿದ ಕ್ಷಿಪಣಿ ದಾಳಿಗೆ ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಖಾಸಗಿ ನೌಕೆ ಹಾನಿಗೀಡಾಗಿತ್ತು. ನಂತರ ಟ್ರೂ ಕಾನ್ಫಿಡೆನ್ಸ್ ಎಂಬ ಹೆಸರಿನ ಈ ಹಡಗಿನಲ್ಲಿದ್ದ ಪ್ರಯಾಣಿಕರು ನಾಪತ್ತೆಯಾಗಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
'ಗಲ್ಫ್ ಆಫ್ ಏಡನ್‌ನಲ್ಲಿ ಭದ್ರತಾ ಕಾರ್ಯ ಕೈಗೊಂಡಿರುವ ಐಎನ್‌ಎಸ್ ಕೋಲ್ಕತ್ತ ಬುಧವಾರ ಸಂಜೆ 4.45ರ ಹೊತ್ತಿಗೆ ಘಟನಾ ಸ್ಥಳಕ್ಕೆ ತಲುಪಿ 21 ಜನರನ್ನು ರಕ್ಷಿಸಿತು. ಇದರಲ್ಲಿ ಒಬ್ಬರು ಭಾರತೀಯರೂ ಇದ್ದರು. ಹೆಲಿಕಾಪ್ಟರ್ ಹಾಗೂ ದೋಣಿಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ, ಅಪಾಯಕ್ಕೆ ಸಿಲುಕಿದ್ದವರಿಗೆ ರಕ್ಷಣಾ ಜಾಕೇಟ್ ನೀಡಿ ರಕ್ಷಿಸಲಾಗಿದೆ' ಎಂದು ಭಾರತೀಯ ನೌಕಾದಳದ ವಕ್ತಾರ ಕಮಾಂಡರ್ ವಿವೇಕ್ ಮಾಧ್ವಾಲ್ ತಿಳಿಸಿದ್ದಾರೆ.
'ಕ್ಷಿಪಣಿ ದಾಳಿ ನಂತರ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ಅದರೊಳಗಿದ್ದವರು ಪ್ರಾಣ ರಕ್ಷಣೆಗಾಗಿ ಹಡಗಿನಿಂದ ಹೊರಕ್ಕೆ ಜಿಗಿಯುವುದು ಅನಿವಾರ್ಯವಾಗಿತ್ತು. ಹೀಗೆ ಸಿಲುಕಿದವರನ್ನು ರಕ್ಷಿಸಲಾಗಿದೆ. ಅವರಿಗೆ ವೈದ್ಯಕೀಯ ಆರೈಕೆಯನ್ನೂ ನೀಡಲಾಗಿದೆ' ಎಂದು ಮಾಧ್ವಾಲ್ ತಿಳಿಸಿದ್ದಾರೆ.
'ಕ್ಷಿಪಣಿ ದಾಳಿಯಲ್ಲಿ ಮೂವರು ಮೃತಪಟ್ಟು, ಕನಿಷ್ಠ ನಾಲ್ಕು ಜನ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಹಡಗಿಗೂ ಭಾರೀ ಸ್ವರೂಪದ ಹಾನಿಯಾಗಿದೆ. ಮೃತಪಟ್ಟವರಲ್ಲಿ ಇಬ್ಬರು ನಾವಿಕರು ಫಿಲಿಪಿನ್ಸ್‌ನವರು ಹಾಗೂ ಒಬ್ಬರು ವಿಯಟ್ನಾಂನವರು' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಹೌತಿ ಭಯೋತ್ಪಾದಕರ ಈ ಕೃತ್ಯದ ನಂತರ ಕೆಂಪು ಸಮುದ್ರದಲ್ಲಿ ಸಾಗುವ ವಿವಿಧ ಮಾದರಿಯ ಹಡಗುಗಳ ಸಂಚಾರಕ್ಕೆ ಆತಂಕ ಎದುರಾಗಿದೆ. ಹಿಂದೂಮಹಾಸಾಗರದ ಪಶ್ಚಿಮ ಭಾಗದಲ್ಲಿ ಸಾಗುವ ಸರಕು ಸಾಗಣೆ ನೌಕೆಗಳನ್ನು ಇಂಥ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ನೌಕಾದಳವು ಕಳೆದ ಕೆಲ ವಾರಗಳಿಂದ ನಿರಂತರವಾಗಿ ಗಸ್ತು ತಿರುಗುತ್ತಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, 'ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕ ಸಂಘಟನೆಯು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಗುಂಪು ಯಮನ್ ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ. ಇಲ್ಲಿ ಸಾಗುತ್ತಿದ್ದ ಟ್ರೂ ಕಾನ್ಫಿಡೆನ್ಸ್ ಎಂಬ ಈ ಹಡಗು ಲೈಬೀರಿಯಾ ಮೂಲದ್ದು ಹಾಗೂ ಬಾರ್ಬಡೋಸ್ ಮಾಲೀಕತ್ವದ್ದಾಗಿದ್ದು, ಗಲ್ಫ್ ಆಫ್ ಏಡನ್ ಬಳಿ ದಾಳಿಗೀಡಾಗಿದೆ' ಎಂದಿದೆ.