ದೇಶದಲ್ಲಿ ಲೋಕಸಭೆ ಚುನಾವಣೆ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿಗಾಗಿ, ಅಧಿಕಾರಕ್ಕಾಗಿ ಬಿಸಿಲು, ಮಳೆ, ಚಳಿ ಎನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಚುನಾವಣೆ ಎಂದರೆ ಅದೊಂದು ಪ್ರಜಾಪ್ರಭುತ್ವದ ಹಬ್ಬ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಚುನಾವಣೆ ನಡೆಯುವುದು ಮತ್ತೊಂದು ವಿಶೇಷ.
ಈ ಎಲ್ಲಾ ವಿಶೇಷಗಳ ನಡುವೆ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ಮತದಾರರ ಬಳಿ ಕಾಡಿಬೇಡಿಯಾದರು ಮತ ಹಾಕಿಸಿಕೊಳ್ಳಲು ಮುಂದಾಗುತ್ತಾರೆ. ಗೆಲುವು ಪಡೆಯಲು ಶತಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಎದುರಿಸಿದ ಎಲ್ಲಾ ಚುನಾವಣೆಯಲ್ಲೂ ಸೋಲು ಕಂಡಿದ್ದು, ವಿಶೇಷ ದಾಖಲೆ ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ.
ತಮಿಳುನಾಡಿನ ಮೆಟ್ಟೂರು ಮೂಲದ ಕೆ.ಪದ್ಮರಾಜನ್ ಬರೋಬ್ಬರಿ 238 ಬಾರಿ ಸೋಲು ಅನುಭವಿಸಿರುವ ವ್ಯಕ್ತಿಯಾಗಿದ್ದಾರೆ. ಸುಮಾರು 65 ವರ್ಷದ ಅವರು ಈ ಬಾರಿಯ ಲೋಕಸಭೆ ಚುನಾವಣೆಗೂ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಈ ಹಿಂದೆ ಸ್ಪರ್ಧಿಸಿರುವ ಎಲ್ಲಾ ಚುನಾವಣೆಯಲ್ಲಿಯೂ ಅವರು ಸೋಲು ಅನುಭವಿಸಿದ್ದಾರೆ.
ಮೊದಲ ಚುನಾವಣೆಹಯಿಂದಲೂ ಸೋಲು
ಪದ್ಮರಾಜನ್ 1988ರಲ್ಲಿ ತಮ್ಮ ಹಟ್ಟೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು. ಟೈರ್ ಅಂಗಡಿ ಮಾಲೀಕರಾಗಿದ್ದ ಅವರು, ಚುನಾವಣೆ ಎದುರಿಸಿ ಹೀನಾಯ ಸೋಲು ಕಂಡಿದ್ದರು. ಇದೀಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಧರ್ಮಪುರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಚುನಾವಣಾ ರಾಜ ಅಂತಲೇ ಫೇಮಸ್
ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆ ವರೆಗೂ ಚುನಾವಣೆ ಸ್ಪರ್ಧಿಸಿರುವ ಈತ ಚುನಾವಣಾ ರಾಜ ಅಂತಲೇ ಫೇಮಸ್ ಆಗಿದ್ದಾರೆ. ಅಚ್ಚರಿ ಎಂದರೆ ಅವರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧವೂ ಸ್ಪರ್ಧಿಸಿ ಸೋಲು ಕಂಡಿದ್ದಾರೆ.
'ಐ ಡೋಂಟ್ ಕೇರ್' ಎನ್ನುವ ಎಲೆಕ್ಷನ್ ಕಿಂಗ್
ಚುನಾವಣೆಯಲ್ಲಿ ಗೆಲುವೊಂದೇ ಮುಖ್ಯವಲ್ಲವಂತೆ. ಸ್ಪರ್ಧಿಸುವುದರಲ್ಲೇ ಅವರು ಗೆಲುವು ಕಾಣುತ್ತಿದ್ದಾರಂತೆ. ಜೊತೆಗೆ ಅವರು ಸತತವಾಗಿ ಸೋಲುತ್ತಿದ್ದರು ಮತ್ತೆ ಮತ್ತೆ ಚುನಾವಣೆಗೆ ನಿಲ್ಲುತ್ತಿರುವುದನ್ನು ಕಂಡ ಜನರು ಇವರಿಗೆ ರಾಜಕೀಯದ ಹುಚ್ಚು ಎಂದು ಆಡಿಕೊಳ್ಳುತ್ತಿದ್ದರಂತೆ, ಆದರೆ ನಾನು ಅದಕ್ಕೆಲ್ಲ ಕೇರ್ ಮಾಡುವವನು ಅಲ್ಲ ಎಂದು ಪದ್ಮರಾಜನ್ ಹೇಳಿದ್ದಾರೆ.
6,273 ಮತ ಗಳಿಸಿರುವುದೇ ಈವರೆಗಿನ ಹೆಚ್ಚು ಮತ
ಇನ್ನು ಇಷ್ಟು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸಿದರು ಅವರು 2011ರಲ್ಲಿ ಪಡೆದಿದ್ದ 6,273 ಮತಗಳು ಅತ್ಯಧಿಕವಂತೆ. ಇದಾದ ಬಳಿಕ ಇಷ್ಟೊಂದು ಮತ ಪಡೆದಿಲ್ಲವಂತೆ. ಆದರೆ ಅವರು ಯಾವ ಚುನಾವಣಯಲ್ಲೂ ಪ್ರಚಾರ ಮಾಡಿಲ್ಲವಂತೆ. ಅವರು ಪ್ರಚಾರ ಮಾಡದೆಯೂ 6 ಸಾವಿರಕ್ಕೂ ಅಧಿಕ ಮತಗಳ ಪಡೆದಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.
ಸ್ಥಳೀಯರಿಗೆ ಇವರು ಐಕಾನ್
ಕೆ. ಪದ್ಮರಾಜನ್ ಸ್ಥಳೀಯವಾಗಿ ಉತ್ತಮ ಹೆಸರು ಹೊಂದಿದ್ದಾರೆ. ಅಲ್ಲಿನ ಜನರ ಕಷ್ಟಗಳ ಆಲಿಸುತ್ತಾರೆ. ಟೈರ್ ಅಂಗಡಿ ಜೊತೆಗೆ ಅವರು ಹೋಮಿಯೋಪತಿ ಉತ್ಪನ್ನಗಳ ಮಾರಾಟ ಮಾಡುತ್ತಾರೆ. ಅಲ್ಲದೆ ಸ್ಥಳೀಯ ಮಾಧ್ಯಮಗಳಿಗೆ ಲೇಖನ ಬರೆಯುತ್ತಾರೆ. ಚುನಾವಣೆ ಮತ್ತು ಮತದಾನದ ಕುರಿತು ಜನರ ಬಳಿ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾರೆ. ಇದರ ಜೊತೆಗೆ ಮತದಾರರ ಚೀಟಿ ಮಾಡಿಸುವುದು, ನಾಮನಿರ್ದೇಶನಗಳು, ಸ್ಥಳೀಯರಿಗೆ ಬೇಕಾದ ಸಹಾಯ ಮಾಡಿಕೊಂಡಿದ್ದಾರೆ.
ಒಂದೊಂದು ಬಾರಿ ಒಂದೊಂದು ಚಿಹ್ನೆಯಡಿ ಚುನಾವಣೆ
ಅವರು 238 ಬಾರಿ ಚುನಾವಣೆ ಎದುರಿಸಿದ್ದು ಎಲ್ಲಾ ಬಾರಿಯೂ ಚಿತ್ರ ವಿಚಿತ್ರವಾದ ಗುರುತಿನಡಿ ಚುನಾವಣೆ ಎದುರಿಸಿದ್ದಾರೆ. ಒಮ್ಮೆ ಎತ್ತಿನಗಾಡಿ, ಟೈರ್, ಮೀನು, ಉಂಗುರ, ಟೋಪಿ, ದೂರವಾಣಿ, ಕಹಳೆ, ಚಪ್ಪಲಿ, ತೆಂಗಿನಕಾಯಿ, ಕಾರು, ಆಟೋ ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಮುಗಿಯುವುದಿಲ್ಲ.