ಕೋಯಿಕ್ಕೋಡ್: ಆನ್ಲೈನ್ ವಂಚಕರ ಜಾಲದಲ್ಲಿ ಸಕ್ರೀಯ ಸದಸ್ಯನಾಗಿದ್ದ 20 ವರ್ಷದ ಯುವಕನನ್ನು ಕೇರಳ ಪೊಲೀಸರು ಬಂಧನ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತನನ್ನು ಜಿಷ್ಣು ಎಂದು ಗುರುತಿಸಲಾಗಿದೆ. ಈತ ಮುಕ್ಕಮ್ ಮಲಮ್ಕುನ್ನು ನಿವಾಸಿ. ಕೇರಳದ ಚೆವಾಯೂರ್ ಪೊಲೀಸರು ಬಂಧನ ಮಾಡಿದ್ದಾರೆ.
ಹಣ ನೀಡುವ ಭರವಸೆ ನೀಡಿ ವಿವಿಧ ಟಾಸ್ಕ್ಗಳಲ್ಲಿ ಭಾಗವಹಿಸುವಂತೆ ಬಳಕೆದಾರರನ್ನು ಪ್ರೇರೇಪಿಸಿ, ಟೆಲಿಗ್ರಾಮ್ ಮೂಲಕ ಲಿಂಕ್ ಕಳುಹಿಸುತ್ತಿದ್ದರು. ಈ ಟಾಸ್ಕ್ನಲ್ಲಿ ಭಾಗವಹಿಸುವುದಾದರೆ ಬಳಕೆದಾರರು ಸ್ವಲ್ಪ ಹಣವನ್ನು ಡೆಪಾಸಿಟ್ ಮಾಡಬೇಕಿತ್ತು. ಇದೇ ರೀತಿ ಸಾಕಷ್ಟು ಮಂದಿಯಿಂದ ಹಣವನ್ನು ಪೀಕಿದ್ದಾರೆ. ವಂಚನೆಗೆ ಒಳಗಾದ ಅಥಿರಾ ಎಂಬಾತ ನೀಡಿದ ದೂರಿನ ಮೇರೆಗೆ ಚೇವಾಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಗ್ಯಾಂಗ್ ಅಥಿರಾ ಖಾತೆಯಿಂದ 25 ಲಕ್ಷ ರೂಪಾಯಿ ದೋಚಿರುವುದಾಗಿ ತಿಳಿದುಬಂದಿದೆ.
ಹಣ ದೋಚಿದ ಬಳಿಕ ತನ್ನ ಖಾತೆಗೆ ಹೆಚ್ಚಿನ ಹಣ ಜಮಾ ಆದರೆ, ಅದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರಿತು, ಅದನ್ನು ತಪ್ಪಿಸಲು ಆರೋಪಿ ಜಿಷ್ಣು, ಬಳಕೆದಾರರ ವಿವಿಧ ಖಾತೆಗಳಲ್ಲಿ ಹಣವನ್ನು ಜಮಾ ಮಾಡುತ್ತಿದ್ದ. ಅಗತ್ಯವಿರುವ ಅವಧಿಯವರೆಗೆ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕೂಡ ಒಂದು ಟಾಸ್ಕ್ ಆಗಿತ್ತು. ಟಾಸ್ಕ್ ಮುಗಿದ ಬಳಿಕ ಜಿಷ್ಣು ಬಳಕೆದಾರರಿಗೆ ಬಹುಮಾನಗಳನ್ನು ಸಹ ನೀಡುತ್ತಿದ್ದ.
ಜಿಷ್ಣು, ಚೆವಾಯೂರ್‌ನಲ್ಲಿ ಭೇಟಿಯಾದ ಯುವಕರ ಖಾತೆಗೆ ಹಣವನ್ನು ವರ್ಗಾಯಿಸಿದ್ದರು. ಹಣವನ್ನು ವಾಪಸ್ ವರ್ಗಾವಣೆ ಮಾಡಿದಾಗ ಜಿಷ್ಣು, 4 ಸಾವಿರ ರೂ. ಪರಿಹಾರ ನೀಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಅಧಿಕಾರಿಗಳ ಕಣ್ತಪ್ಪಿಸಲು ವಿವಿಧ ಖಾತೆಗಳಲ್ಲಿ ಹಣವನ್ನು ವರ್ಗಾವಣೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ.