ಕಾಸರಗೋಡು: ಕಳೆದ ಎರಡು ತಿಂಗಳ ಕಾಲಾವಧಿಯಲ್ಲಿ ಕಾಸರಗೋಡು ಸೇರಿದಂತೆ ಆರು ಜಿಲ್ಲೆಗಳಿಗೆ ಇತರ ರಾಜ್ಯಗಳಿಂದ ಭರೋಬ್ಬರಿ 264ಕೋಟಿ ರೂ. ಹವಾಲಾ ಹಣ ರವಾನೆಯಾಗಿರುವ ಬಗ್ಗೆ ರಾಜ್ಯ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ. ಕೇರಳಕ್ಕೆ ಭಾರಿ ಪ್ರಮಾಣದ ಹಣ ರವಾನೆಯಾಗಿರುವ ಬಗ್ಗೆ ರಾಜ್ಯ ಗುಪ್ತಚರ ವಿಭಾಗದ ಜತೆಗೆ ಕೇಂದ್ರ ಗುಪ್ತಚರ ವಿಭಾಗಗಳೂ ತನಿಖೆ ಆರಂಭಿಸಿದೆ.
ಚುನಾವಣೆ ಕಾಲಾವಧಿಯಲ್ಲಿ ಹಣ ರವಾನೆ ಕ್ಲಿಷ್ಟಕರ ಎಂಬುದನ್ನು ಅರಿತಿರುವ ಕಾಳಧನ ದಂಧೆಕೋರರು ಚುನಾವಣೆ ಘೋಷಣೆಗೆ ಒಂದು ತಿಂಗಳ ಹಿಂದೆಯೇ ಹಣ ರವಾನೆಗೆ ತೊಡಗಿರುವುದಾಗಿ ಮಾಹಿತಿ ಲಭಿಸಿದೆ. ಕಲೆದ ನಾಲ್ಕು ದಿವಸಗಳಿಂದ ಕಾರಳದ ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸ್ ಪಡೆದ ವಾಹನತಪಾಸಣೆ ಚುರುಕುಗೊಳಿಸಿದೆ. ವಾಹನಗಳ ಮೂಲಕ ಹಾಗೂ ಸಮುದ್ರ ಮಾರ್ಗವಾಗಿಯೂ ಹವಾಲಾಹಣ ಹರಿದುಬರುತ್ತಿರುವುದಾಗಿ ಮಾಹಿತಿ ಲಭಿಸಿದ್ದು, ಇದಕ್ಕೆ ಉಗ್ರಗಾಮಿ ಸಂಘಟನೆಗಳ ನಂಟು ಹೊಂದಿರುವ ಬಗ್ಗೆಯೂ ಗುಮಾನಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕೋಸ್ಟಲ್ ಗಾರ್ಡ್ ಸಹಾಯದೊಂದಿಗೆ ಸಮುದ್ರ ಮಾರ್ಗದಲ್ಲೂ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.