ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟವು 272ರ ಗಡಿ ದಾಟುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಭಾನುವಾರ ಹೇಳಿದರು.
ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ 'ಇಂಡಿಯಾ' ಒಕ್ಕೂಟವು 272ರ ಗಡಿ ದಾಟುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಭಾನುವಾರ ಹೇಳಿದರು.
ಪಿಟಿಐ ಸಂಪಾದಕರ ಜೊತೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ₹4,000 ಕೋಟಿಯ ಚುನಾವಣಾ ಬಾಂಡ್‌ಗಳಿಗೂ ₹4 ಲಕ್ಷ ಕೋಟಿ ಮೊತ್ತದ ಕರಾರುಗಳಿಗೂ ನೇರ ಸಂಬಂಧವಿದೆ ಎಂದು ಆರೋಪಿಸಿದರು.
ಮೂಲಸೌಕರ್ಯ ಯೋಜನೆಗಳ ಗುತ್ತಿಗೆ ಲಭಿಸಿದ ಬಳಿಕ ಬಿಜೆಪಿ ಸಂಸದರು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದಾರೆ ಎಂದೂ ಹೇಳಿದರು.
ವಿವಿಧ ಕಂಪನಿಗಳು ಬಿಜೆಪಿ ಪರವಾಗಿ ₹4,000 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿರುವುದಕ್ಕೂ ಗುತ್ತಿಗೆ ನೀಡಿರುವುದಕ್ಕೂ ನಂಟಿರುವ ಬಗ್ಗೆ ದಾಖಲೆಗಳಿದ್ದು, ಕೇಂದ್ರ ತನಿಖಾ ಸಂಸ್ಥೆಗಳು ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
'ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಉದಾಹರಣೆ ನೀಡಿ, ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಮೋದಿ ಅವರು ನೀಡುತ್ತಿರುವ ಹೇಳಿಕೆಗಳು ಕೇವಲ ಬೋಗಸ್' ಎಂದರು.
'ಇಂಡಿಯಾ' ಒಕ್ಕೂಟವೆಂಬ ಗುಳ್ಳೆಯು ಒಡೆದು ಹೋಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಒಕ್ಕೂಟವು ಒಡೆದು ಹೋಗಿಲ್ಲ. ಎಎಪಿ, ಎನ್‌ಸಿಪಿ ಶರದ್ ಪವಾರ್ ಬಣ, ಶಿವಸೇನಾ ಉದ್ಧವ್ ಠಾಕ್ರೆ ಬಣ, ಡಿಎಂಕೆ, ಜೆಎಂಎಂ' ಜೊತೆಗಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಮತ್ತು ಸಿಪಿಐ ಜೊತೆಗಿನ ಮೈತ್ರಿ ಶೀಘ್ರ ಅಂತಿಮಗೊಳ್ಳಲಿದೆ ಎಂದೂ ವಿವರಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಮ್ಮೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳದಿದ್ದರೂ ಅವರು ಒಕ್ಕೂಟದ ಜೊತೆಗಿದ್ದಾರೆ ಎಂದು ಹೇಳಿದರು.