ನವದೆಹಲಿ: ಈ ಬಾರಿ ಬಿಜೆಪಿ 370 ಹಾಗೂ ಎನ್‌ಡಿಎ ಒಕ್ಕೂಟ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸದಲ್ಲಿ ಭಾರತೀಯ ಜನತಾ ಪಕ್ಷ ಬೀಗುತ್ತಿದೆ.
ಆದರೆ ನ್ಯೂಸ್18 ಸಮೀಕ್ಷೆ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಕ್ಷೇತ್ರಗಳನ್ನು ಗೆಲ್ಲಲಿದೆ.
ಸಮೀಕ್ಷೆ ಪ್ರಕಾರ ಮೋದಿ ವರ್ಚಸ್ಸಿಗೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಯಾವುದೇ ಹಾನಿ ಮಾಡದು. ಹೀಗಾಗಿ ಸತತವಾಗಿ ಮೂರನೇ ಬಾರಿಗೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ಮತ್ತೊಂದೆಡೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ 105 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯ. ಇದರಲ್ಲಿ ಕಾಂಗ್ರೆಸ್ ಕೇವಲ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದೆನ್ನಲಾಗಿದೆ. 2014ರಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಂತ ಕಡಿಮೆ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ನ್ಯೂಸ್ 18 ಸಮೀಕ್ಷೆ ಪ್ರಕಾರ ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದೆ. ರಾಜ್ಯವಾರು ಸಮೀಕ್ಷೆಯಲ್ಲಿ...
ಕರ್ನಾಟಕ
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎನ್‌ಡಿಎ ಒಕ್ಕೂಟವು ಈ ಬಾರಿಯೂ ತನ್ನ ಅದೇ ಗೆಲುವಿನ ಓಟವನ್ನು ಮುಂದುವರಿಸಲಿದೆ ಎಂದು ಸಮೀಕ್ಷೆ ಹೇಳಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಕೇವಲ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದೆನ್ನಲಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಮಹಾರಾಷ್ಟ್ರ
ಬಿಜೆಪಿ-ಶಿವಸೇನಾ-ಎನ್‌ಸಿಪಿ ಮೈತ್ರಿಯು ರಾಜ್ಯದಲ್ಲಿ ಎನ್‌ಡಿಎಗೆ ಗರಿಷ್ಠ ಸ್ಥಾನವನ್ನು ತಂದುಕೊಡಲಿದೆ. 48 ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಈ ಮೈತ್ರಿಯು ಒಟ್ಟು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಎನ್‌ಸಿಪಿ ಶರದ್‌ಪವಾರ್ ಬಣ, ಕಾಂಗ್ರೆಸ್, ಉದ್ದವ್ ಠಾಕ್ರೆ ಬಣದ ಶಿವಸೇನಾ ಒಳಗೊಂಡ ಮಹಾರಾಷ್ಟ್ರದ ಇಂಡಿಯಾ ಒಕ್ಕೂಟವು 7 ಕ್ಷೇತ್ರವನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.
ಪಶ್ಚಿಮ ಬಂಗಾಳ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಆದರೆ ರಾಜ್ಯದಲ್ಲಿರುವ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಮತ್ತು ಟಿಎಂಸಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದೆನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಗುಜರಾತ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯದಲ್ಲಿ ಬಿಜೆಪಿಯು 2014 ಹಾಗೂ 2019ರಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 26 ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಈ ಬಾರಿಯೂ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಮತ್ತೆ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಲಾಗಿದೆ.
ತೆಲಂಗಾಣ
ರಾಜ್ಯದಲ್ಲಿರವು 17 ಕ್ಷೇತ್ರಗಳಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮತ್ತು ಬಿಆರ್‌ಎಸ್ ಕೇವಲ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದೆನ್ನಲಾಗಿದೆ.
ಒಡಿಶಾ
ಸಮೀಕ್ಷೆ ಪ್ರಕಾರ ಆಡಳಿತಾರೂಢ ಬಿಜೆಡಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮತ್ತೊಂದೆಡೆ ಬಿಜೆಪಿಯು 13 ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ ಎಂದೆನ್ನಲಾಗಿದೆ.
ಉತ್ತರ ಪ್ರದೇಶ
80 ಲೋಕಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಸಮೀಕ್ಷೆ ಪ್ರಕಾರ ಎನ್‌ಡಿಎ ಒಕ್ಕೂಟವು 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ಒಕ್ಕುಟವು 2 ಕ್ಷೇತ್ರಗಳಲ್ಲಿ ಹಾಗೂ ಬಹುಜನ ಸಮಾಜವಾದಿ ಪಕ್ಷವು ಒಂದು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
2019ರ ಚುನಾವಣೆಯ ಫಲಿತಾಂಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಕಾಂಗ್ರೆಸ್ 52, ತೃಣಮೂಲ ಕಾಂಗ್ರೆಸ್ 22, ಬಿಎಸ್‌ಪಿ 10, ಎನ್‌ಸಿಪಿ 5, ಸಿಪಿಐ-ಎಂ-3 ಹಾಗೂ ಸಿಪಿಐ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಆಗ ದೇಶದಲ್ಲಿ ಒಟ್ಟು 91.2 ಕೋಟಿ ಮತದಾರರು ಇದ್ದರು. ಇವರಲ್ಲಿ 43.8 ಕೋಟಿಯಷ್ಟು ಮಹಿಳಾ ಮತದಾರರೇ ಇದ್ದರು. ಪುರುಷ ಮತದಾರರ ಸಂಖ್ಯೆ 47.3 ಕೋಟಿಯಷ್ಟಿತ್ತು. ಶೇ 67.4ರಷ್ಟು ಮತದಾನವಾಗಿದ್ದು ಒಟ್ಟು 61.5 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದರು.