ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ. ಕೇಜ್ರಿವಾಲ್ ಬಂಧನ ಖಂಡಿಸಿ 'ಇಂಡಿಯಾ' ಮೈತ್ರಿಕೂಟ ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಲಿದೆ ಎಂದು ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರೈ ಭಾನುವಾರ ಘೋಷಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಗೋಪಾಲ್ ರೈ, ರಾಷ್ಟ್ರ ರಾಜಧಾನಿ ಈಗ 'ಮಿಲಿಟರಿ ಕಂಟೋನ್ಮೆಂಟ್' ನಂತೆ ಮಾರ್ಪಟ್ಟಿದೆ ಎಂದರು.
ರ‍್ಯಾಲಿ ನಡೆಸಲು ಅನುಮತಿಗಾಗಿ ಪಕ್ಷದ ಉನ್ನತ ನಾಯಕರು ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದಾರೆ.
'ಪ್ರತಿಪಕ್ಷಗಳ ನಾಯಕರನ್ನು ನಕಲಿ ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿದೆ. ಈಗ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ' ಎಂದು ಗೋಪಾಲ್ ರೈ ದೂರಿದರು.
ರ‍್ಯಾಲಿಯಲ್ಲಿ ಇಂಡಿಯಾ ಮೈತ್ರಿ ಕೂಟದ ಎಲ್ಲ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದರು.