ಶ್ರೀನಗರ: 2019 ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಶೇಷ ಸ್ಥಾನಮಾನದ ಬಗ್ಗೆ ಕಾಶ್ಮೀರ ಜನರ ದಾರಿ ತಪ್ಪಿಸಿದ್ದವು ಎಂದು ಗುರುವಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2019 ರಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯ ಹೊಸ ಮೈಲುಗಲ್ಲು ತಲುಪಿದೆ. ಇಲ್ಲಿನ ಜನ ಈಗ ಮುಕ್ತವಾಗಿ ಉಸಿರಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 370ನೇ ವಿಧಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ "ಜಮ್ಮು ಮತ್ತು ಕಾಶ್ಮೀರದ ಜನರನ್ನು ಮಾತ್ರವಲ್ಲದೆ ಇಡೀ ದೇಶವನ್ನೇ ದಾರಿ ತಪ್ಪಿಸುತ್ತಿವೆ" ಎಂದು ಮೋದಿ ಆರೋಪಿಸಿದರು.
ಜಮ್ಮು ಮತ್ತು ಕಾಶ್ಮೀರ ದೇಶದ ಕಿರೀಟ ಎಂದು ಬಣ್ಣಿಸಿದ ಪ್ರಧಾನಿ, ಪ್ರವಾಸೋದ್ಯಮ ಮತ್ತು ರೈತರ ಸಬಲೀಕರಣದಿಂದ ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಈ ಹೊಸ ಜಮ್ಮು ಕಾಶ್ಮೀರಕ್ಕಾಗಿ ನಾವೆಲ್ಲರೂ ಹಲವು ದಶಕಗಳಿಂದ ಕಾಯುತ್ತಿದ್ದೆವು. ಈ ಹೊಸ ಜಮ್ಮು ಕಾಶ್ಮೀರಕ್ಕಾಗಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಈ ಹೊಸ ಜಮ್ಮು ಮತ್ತು ಕಾಶ್ಮೀರದ ದೃಷ್ಟಿಯಲ್ಲಿ ಭವಿಷ್ಯವು ಹೊಳೆಯುತ್ತಿದೆ, ಸವಾಲುಗಳನ್ನು ಜಯಿಸುವ ಈ ಹೊಸ ಜಮ್ಮು ಮತ್ತು ಕಾಶ್ಮೀರದ ಉದ್ದೇಶಗಳಲ್ಲಿ ಧೈರ್ಯವಿದೆ ಎಂದು ಕೊಂಡಾಡಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರು 6,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು 'ವಿಕ್ಷಿತ್ ಭಾರತ್, ವಿಕ್ಷಿತ್ ಜಮ್ಮು ಕಾಶ್ಮೀರ' ಕಾರ್ಯಕ್ರಮದಲ್ಲಿ ಭಾಗವಹಿಸಿದರು.