ಮಂಗಳೂರು: ಇಲ್ಲಿನ ಹಳೆ ಬಂದರಿನಿಂದ ಮಾ.12ರಂದು ಲಕ್ಷದೀಪಕ್ಕೆ ಹೊರಟ ಸರಕು ಸಾಗಣೆ ಹಡಗು ಎಂಎಸ್‌ವಿ ವರಥರಾಜನ್ (ಸಿಎಲ್‌ಆರ್192) ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಅದರಲ್ಲಿದ್ದ ಎಂಟು ಸಿಬ್ಬಂದಿಯನ್ನು ಲಕ್ಷದ್ವೀಪ ಸಮೂಹದ ಕಲ್ಪೇಣಿ ದ್ವೀಪದ ಮೀನುಗಾರರು ಸೋಮವಾರ (ಮಾ.18ರಂದು) ರಕ್ಷಣೆ ಮಾಡಿದ್ದಾರೆ.
ಸಿಮೆಂಟ್, ಜಲ್ಲಿಕಲ್ಲು, ಮರಳು (ಎಂ.ಸ್ಯಾಂಡ್), ಕಬ್ಬಿಣ ಹಾಗೂ ತರಕಾರಿಯೊಂದಿಗೆ ಇಲ್ಲಿನ ಹಳೆಬಂದರು ಧಕ್ಕೆಯಿಂದ ಹೊರಟಿದ್ದ ಹಡಗು ಲಕ್ಷದ್ವೀಪದ ಆಂಡ್ರೋತ್ ದ್ವಿಪವನ್ನು ಮಾ.13ರಂದು ರಾತ್ರಿ ತಲುಪಿತ್ತು. ಅಲ್ಲಿ ಸ್ವಲ್ಪ ಸರಕನ್ನು ಇಳಿಸಿ, ಇನ್ನುಳಿದ ಸರಕನ್ನು ಅಗಥಿ ದ್ವೀಪಕ್ಕೆ ಸಾಗಿಸಬೇಕಿತ್ತು. ಆಂಡ್ರೋತ್ ದ್ವೀಪದಿಂದ ಮಾರ್ಚ್ 14ರಂದು ಅಗಥಿ ದ್ವೀಪಕ್ಕೆ ಸಾಗುವಾಗ ಹಡಗು ಭಾರಿ ಗಾಳಿಯ ಒತ್ತಡಕ್ಕೆ ಸಿಲುಕಿತ್ತು. ಅದೇ ವೇಳೆ ಹಡಗಿನ ಎಂಜಿನ್ ಹದಗೆಟ್ಟಿತ್ತು. ಕ್ರಮೇಣ ಹಡಗಿನೊಳಗೆ ನೀರು ನುಗ್ಗಿತ್ತು. ಹಡಗು ಮುಳುಗುವುದ ಖಚಿತವಾಗುತ್ತಿದ್ದಂತೆಯೇ ಅದರಲ್ಲಿದ್ದ ಎಂಟು ಮಂದಿ ಸಿಬ್ಬಂದಿ ಪಾತಿಯಲ್ಲಿ (ಪುಟ್ಟ ದೋಣಿ) ರಕ್ಷಣೆ ಪಡೆದರು. ಈ ಹಡಗಿನ ಮಾಲೀಕ ಹಾಗೂ ಸಿಬ್ಬಂದಿ ತಮಿಳುನಾಡಿನವರು' ಎಂದು ಹಳೆಬಂದರು ಬಳಕೆದಾರರ ಸಂಘದ ಕಾರ್ಯದರ್ಶಿ ಅಬ್ದುಲ್ ಲತೀಫ್ ಬೆಂಗರೆ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.
'ಪಾತಿಯಲ್ಲಿ ಯಂತ್ರವನ್ನು ಅಳವಡಿಸಿರುವುದಿಲ್ಲ. ಹಾಗಾಗಿ ಅದನ್ನು ಬಳಸಿ ದಡ ಸೇರಲು ಆಗುವುದಿಲ್ಲ. ಹಡಗು ಮುಳುಗಿದ್ದರಿಂದ ಸಿಬ್ಬಂದಿ ಮೂರು ದಿನಗಳ ಕಾಲ ಸಮುದ್ರದಲ್ಲಿ ಆಹಾರವಿಲ್ಲದೇ ಕಳೆದಿದ್ದರು. ಕಲ್ಪೇಣಿ ದ್ವಿಪದ ಮೀನುಗಾರರು ಸಮುದ್ರದಲ್ಲಿ ಸಿಲುಕಿದ್ದ ಹಡಗಿನ ಕ್ಯಾಪ್ಟನ್ ಭಾಸ್ಕರನ್ ಹಾಗೂ ಸಿಬ್ಬಂದಿಯಾದ ನಾಗಲಿಂಗಂ, ನಲ್ಲಮುತ್ತು ಗೋಪಾಳ್, ಮಂಡಿದೇವನ್ ವೇಲು, ವಿಘ್ನೇಶ್, ಅಜಿತ್ ಕುಮಾರ್ ಎಸ್., ಕುಪ್ಪುರಾಮನ್, ಎಂ.ಮುರುಗನ್ ಅವರನ್ನು ರಕ್ಷಣೆ ಮಾಡಿದ್ದರು. ಪಾತಿಯನ್ನು ತಮ್ಮ ಮೀನುಗಾರಿಕಾ ದೋಣಿಯ ಮೂಲಕ ಕಲ್ಪೇಣಿ ದ್ವೀಪಕ್ಕೆ ಕರೆದೊಯ್ದು ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದರು. ರಕ್ಷಣೆ ಮಾಡಲಾದ ಸಿಬ್ಬಂದಿಯನ್ನು ಕರಾವಳಿ ರಕ್ಷಣಾ ಪಡೆಯ ಕೊಚ್ಚಿ ನೆಲೆಗೆ ಕರೆದೊಯ್ಯಲಾಗಿದೆ' ಎಂದು ಅವರು ತಿಳಿಸಿದರು.
'ಹಡಗು ಮುಳುಗಿದ ಬಗ್ಗೆ ಮಂಗಳೂರು ಮತ್ತು ಲಕ್ಷದ್ವೀಪದ ಕರಾವಳಿ ರಕ್ಷಣಾ ಪಡೆಗೆ ಸಂತ್ರಸ್ತ ಮೀನುಗಾರರು ಮಾಹಿತಿ ನೀಡಿದ್ದರು. ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕಡಲಿನಲ್ಲಿ ಸಿಲುಕಿದ್ದ ಸಿಬ್ಬಂದಿಗಾಗಿ ಮಾರ್ಚ್ 15ರಿಂದ 17ರವರೆಗೆ ಹುಡುಕಾಟ ನಡೆಸಿದ್ದರು. ಆದರೂ ಅವರು ಪತ್ತೆಯಾಗಿರಲಿಲ್ಲ' ಎಂದರು.
'ಲಕ್ಷಾಂತರ ರೂಪಾಯಿ ಸರಕು ನಷ್ಟ'
ಹಡಗಿನಲ್ಲಿ ಸಾಗಿಸಿದ್ದ ಲಕ್ಷಾಂತರ ರೂಪಾಯಿ ಸರಕು ಸಮುದ್ರಪಾಲಾಗಿದೆ. ವರ್ಷದ ಹಿಂದೆಯೂ ಒಂದು ದೋಣಿ ಇದೇ ರೀತಿ ಮುಳುಗಡೆಯಾಗಿದೆ. ಮೀನುಗಾರಿಕಾ ದೋಣಿ ಮುಳುಗಿದರೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಸಿಗುತ್ತದೆ. ಅದರೆ ಸರಕು ಸಾಗಣೆ ಹಡಗು ಮಾಲೀಕರಿಗೆ ಅಂತಹ ಯಾವುದೇ ರಕ್ಷಣೆ ಇಲ್ಲ. ನಮ್ಮಿಂದ ತೆರಿಗೆ ಪಡೆಯುವ ಸರ್ಕಾರ ಈ ತಾರತಮ್ಯ ನೀತಿಯನ್ನು ಸರಿಪಡಿಸಬೇಕು' ಎಂದು ಅಬ್ದುಲ್ ಲತೀಫ್ ಒತ್ತಾಯಿಸಿದರು.