ನವದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಲು ಕೇಂದ್ರ ಚುನಾವಣಾ ಆಯೋಗವು ನಾಳೆ(ಶನಿವಾರ) ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದೆ.
2024ರ ಲೋಕಸಭಾ ಮತ್ತು ಕೆಲ ರಾಜ್ಯಗಳ ವಿಧಾನಸಭೆಗಳ ಚುನಾವಣಾ ದಿನಾಂಕವನ್ನು ಪ್ರಕಟಿಸಲು ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಲಾಗುತ್ತದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ಆಯೋಗದ ಜಾಲತಾಣಗಳಲ್ಲಿ ಪತ್ರಿಕಾಗೋಷ್ಠಿ ನೇರ ಪ್ರಸಾರವಾಗಲಿದೆ.
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸದನ ರಚನೆಯಾಗಬೇಕಿದೆ.
ಕಳೆದ ಬಾರಿ ಮಾರ್ಚ್ 10ರಂದು ಚುನಾವಣಾ ದಿನಾಂಕ ಘೋಷಿಸಲಾಗಿತ್ತು. ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23 ರಂದು ಮತ ಎಣಿಕೆ ನಡೆದಿತ್ತು.
ಚುನಾವಣೆಗೆ ಆಯೋಗವು ಸಿದ್ಧತೆಯಲ್ಲಿ ತೊಡಗಿದ್ದು, ನಿನ್ನೆಯಷ್ಟೆ, ಇಬ್ಬರು ಆಯುಕ್ತರನ್ನು ನೇಮಕ ಮಾಡಿತ್ತು.
ಗುರುವಾರ ನೇಮಕಗೊಂಡಿದ್ದ ಇಬ್ಬರು ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್‌ಬೀರ್ ಸಿಂಗ್ ಸಂಧು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಫೆಬ್ರುವರಿ 14ರಂದು ಅನೂಪ್ ಚಂದ್ರ ಪಾಂಡೆ ನಿವೃತ್ತಿ ಮತ್ತು ಮಾರ್ಚ್ 8ರಂದು ಅರುಣ್ ಗೋಯಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಚುನಾವಣಾ ಆಯೋಗದಲ್ಲಿ ಎರಡು ಆಯುಕ್ತರ ಹುದ್ದೆಗಳು ಖಾಲಿಯಾಗಿದ್ದವು.