ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದಿದ್ದ ಚೀತಾ ಮರಿಗಳಿಗೆ ಜನ್ಮ ನೀಡಿದ್ದ ಕುರಿತು ಇದೀಗ ಮತ್ತೊಂದು ಸ್ಪಷ್ಟನೆ ದೊರೆತಿದ್ದು, ಗಾಮಿನಿ ಜನ್ಮ ನೀಡಿದ್ದು 5 ಅಲ್ಲ.. ಆರು ಮರಿಗಳಿಗೆ ಎಂದು ಹೇಳಲಾಗಿದೆ.
ಈ ಕುರಿತು ಖುದ್ಧ ಕೇಂದ್ರ ಸಚಿವ ಭೂಪೇಂದರ್ ಯಾದವ್ ಸ್ಪಷ್ಟನೆ ನೀಡಿದ್ದು, ಗಾಮಿನಿ ಚೀತಾಗೆ ಐದು ಮರಿಗಳು ಜನಿಸಿದ ಸುದ್ದಿಯ ಒಂದು ವಾರದ ನಂತರ, ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿ ಆರು ಮರಿಗಳಿಗೆ ಜನ್ಮ ನೀಡಿರುವುದು ಇದೀಗ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್/ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮೊದಲ ಬಾರಿಗೆ ತಾಯಿಯಾದ ಚೀತಾವೊಂದು ಇಷ್ಟು ಮರಿಗಳಿಗೆ ಜನ್ಮ ನೀಡಿರುವುದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.
ಚೀತಾ ಯೋಜನೆಯಡಿ ಭಾರತಕ್ಕೆ ದಕ್ಷಿಣ ತರಲಾಗಿದ್ದ ಗಾಮಿನಿ ಚೀತಾ ವಾರದ ಹಿಂದಷ್ಟೇ ಮರಿಗಳಿಗೆ ಜನ್ಮ ನೀಡಿತ್ತು. ಆಗ 5 ಮರಿಗಳು ಎಂದು ಹೇಳಲಾಗಿತ್ತಾದರೂ ಇದೀಗ ಅದು ಜನ್ಮ ನೀಡಿರುವುದು 6 ಮರಿಗಳಿಗೆ ಎಂದು ದೃಢಪಟ್ಟಿದೆ.
ಅಂದಹಾಗೆ ಗಾಮಿನಿ ಭಾರತದ ನೆಲದಲ್ಲಿ ಮರಿಗಳಿಗೆ ಜನ್ಮ ನೀಡಿದ ನಾಲ್ಕನೇ ಚೀತಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳ ಪೈಕಿ ಮರಿಗಳಿಗೆ ಜನ್ಮ ನೀಡಿದ ಮೊದಲ ಚೀತಾ ಆಗಿದೆ.
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಯೋಜನೆಯಡಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದ ಚೀತಾಗಳನ್ನು 2022 ರ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಬಿಡುಗಡೆ ಮಾಡಲಾಯಿತು. ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಉದ್ಯಾನವನಕ್ಕೆ ತರಲಾಯಿತು. ಗಮಿನಿ ದಕ್ಷಿಣ ಆಫ್ರಿಕಾದಿಂದ ತಂದ ಗುಂಪಿನ ಭಾಗವಾಗಿದೆ.