ತಿರುವನಂತಪುರಂ: ಸೆಕ್ರೆಟರಿಯೇಟ್‍ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸಿಪಿಒ ಶ್ರೇಣಿ(ರ್ಯಾಂಕ್ ಲೀಸ್ಟ್) ಹೊಂದಿರುವವರು ಹಾಗೂ ರಾಜ್ಯ ಪೋಲೀಸ್ ಮುಖ್ಯಸ್ಥರೊಂದಿಗೆ ನಡೆಸಿದ ಸಂಧಾನ ವಿಫಲವಾಗಿದೆ.
ವರದಿಯಾದ ಖಾಲಿ ಹುದ್ದೆಗಳ ಬಗ್ಗೆ ವಿವರಣೆಯನ್ನು ಬಳಿಕ ಪೋಲೀಸರು ಬಿಡುಗಡೆಗೊಳಿಸಿರುವರು. ಆದರೆ ಇವು ನಕಲಿ ಎಂದು ಅಭ್ಯರ್ಥಿಗಳು ಅಂಕಿ ಅಂಶಗಳ ಸಮೇತ ಸ್ಪಷ್ಟಪಡಿಸುತ್ತಿದ್ದಾರೆ.
ಪೋಲೀಸರ ಅಧಿಕೃತ ಫೇಸ್‍ಬುಕ್ ಪುಟದ ಪ್ರಕಾರ, 5,038 ಜನರನ್ನು ನೇಮಿಸಲಾಗಿದೆ. ಇದುವರೆಗೆ 3,326 ಹುದ್ದೆಗಳಿಗೆ ಮಾತ್ರ ನೇಮಕ ಮಾಡಲಾಗಿದೆ ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ. ಉಳಿದ ಹುದ್ದೆಗಳು ಶ್ರೇಣಿಯ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಸಂಗ್ರಹಿಸಿದ ಎನ್.ಜೆ.ಡಿ ಹುದ್ದೆಗಳಾಗಿವೆ. ಮಹಿಳಾ ಕಾನ್ಸ್‍ಟೇಬಲ್, ಪೋಲೀಸ್ ಚಾಲಕ, ಎಸ್‍ಸಿ-ಎಸ್‍ಟಿ ವಿಶೇಷ ನೇಮಕಾತಿ ಮತ್ತು ಪೋಲೀಸ್ ಟೆಲಿಕಮ್ಯುನಿಕೇಶನ್ ಹುದ್ದೆಗಳನ್ನೂ ಸಹ ಈ ಅಂಕಿ ಅಂಶ ಒಳಗೊಂಡಿದೆ ಎಂದು ಅಭ್ಯರ್ಥಿಗಳು ಪುರಾವೆಯೊಂದಿಗೆ ಪ್ರತಿಪಾದಿಸಿದ್ದಾರೆ.
ಸರ್ಕಾರ ನೇರ ಮಾತುಕತೆಗೆ ಸಿದ್ಧವಾಗುವವರೆಗೆ ಧರಣಿಯನ್ನು ತೀವ್ರಗೊಳಿಸಲು ಅಭ್ಯರ್ಥಿಗಳು ನಿರ್ಧರಿಸಿದ್ದಾರೆ. ರ್ಯಾಂಕ್ ಪಟ್ಟಿಯ ಅವಧಿಯನ್ನು ವಿಸ್ತರಿಸಿ, ಈಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಪೋಲೀಸ್ ಠಾಣೆಗಳ ಬಲವರ್ಧನೆಗೆ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಆಕಾಂಕ್ಷಿಗಳು ಮುಂದಿಟ್ಟಿದ್ದಾರೆ.
ಪೋಲೀಸ್ ವರಿಷ್ಠ ಹಾಗೂ ಉನ್ನತ ಪೋಲೀಸ್ ಅಧಿಕಾರಿಗಳ ಜತೆ ನಡೆಸಿದ ಚರ್ಚೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಾಗಿದೆ. ಹೀಗಿರುವಾಗ ಸರ್ಕಾರ ಚರ್ಚೆಗೆ ಮಣಿಯಬೇಕು ಎಂಬುದು ಅಭ್ಯರ್ಥಿಗಳ ಆಗ್ರಹವಾಗಿದೆ. 13,975 ಜನರಿರುವ ರಾಜ್ಯದ ಏಳು ಬೆಟಾಲಿಯನ್‍ಗಳಿಗೆ 3,326 ಜನರನ್ನು ಮಾತ್ರ ರ್ಯಾಂಕ್ ಪಟ್ಟಿಯಲ್ಲಿ ನೇಮಿಸಲಾಗಿದೆ ಎಂದು ಅಭ್ಯರ್ಥಿಗಳು ಗಮನಸೆಳೆದಿದ್ದಾರೆ.
ಕಳೆದ 20 ದಿನಗಳಿಂದ ಧರಣಿ ನಡೆಯುತ್ತಿದ್ದರೂ ಸರ್ಕಾರ ಅಥವಾ ಇತರೆ ಪ್ರತಿನಿಧಿಗಳು ಮಧ್ಯಪ್ರವೇಶಿಸದ ಕಾರಣ ಅಭ್ಯರ್ಥಿಗಳು ಧರಣಿಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದು, ಅಭ್ಯರ್ಥಿಗಳ ಕುಟುಂಬಸ್ಥರು ನಿನ್ನೆ ಧರಣಿಯ ಮುಂಚೂಣಿಗೆ ಬಂದಿದ್ದರು. ಏಳು ಗಂಟೆಗಳ ಕಾಲ ಸೆಕ್ರೆಟರಿಯೇಟ್ ರಸ್ತೆ ತಡೆ ನಡೆಸಲಾಯಿತು.
ಸುಡುವ ಬಿಸಿಲಿನ ಮಧ್ಯೆ ತಾಯಂದಿರು ಕುಸಿದರು. ಅಂಬೆಗಾಲಿಡುವ ಮಕ್ಕಳೊಂದಿಗೆ ಬಂದವರಿಗೂ ತೊಂದರೆಯಾಯಿತು. ಪರಿಹಾರ ಕಂಡುಕೊಳ್ಳದೆ ದಿಗ್ಬಂಧನ ಅಂತ್ಯಗೊಳಿಸದಿರಲು ನಿರ್ಧರಿಸಿದಾಗ ಪೋಲೀಸ್ ಮುಖ್ಯಸ್ಥರು ಚರ್ಚೆಗೆ ಸಿದ್ಧರಾಗಿದ್ದರು. ಇದಾದ ಬಳಿಕ ನಕಲಿ ಅಂಕಿ-ಅಂಶಗಳನ್ನು ಬರೆದು ಉತ್ಪ್ರೇಕ್ಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.