ಉಪ್ಪಳ: ಎಟಿಎಂ ಕೇಂದ್ರಕ್ಕೆ ತುಂಬಿಸಲು ತಂದ 50 ಲಕ್ಷ ರೂ.ಗಳನ್ನು ದರೋಡೆಗೈದ ಘಟನೆ ಇಂದು ಹಾಡುಹಗಲೇ ಉಪ್ಪಳದಲ್ಲಿ ನಡೆದಿದೆ. ಎಕ್ಸಿಸ್ ಬ್ಯಾಂಕ್ ಎಟಿಎಂ ಘಟಕಕ್ಕೆ ತುಂಬಿಸಲು ವ್ಯಾನ್ ಮೂಲಕ ತಂದ ಹಣವನ್ನು ದೋಚಲಾಗಿದೆ. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವ್ಯಾನ್ ಎಟಿಎಂ ಕೌಂಟರ್ ಮುಂದೆ ನಿಲುಗಡೆಗೊಳಿಸಿ ಎಟಿಎಂ ಯಂತ್ರಕ್ಕೆ ವಿಲೇವಾರಿಗೊಳಿಸುತ್ತಿರುವ ಮಧ್ಯೆ ಈ ದರೋಡೆ ನಡೆದಿದೆ.
ಎಟಿಎಂ ಕೌಂಟರ್ ಗೆ ಹಣ ತುಂಬಿಸಲು ಹಣದ ಕಂತೆಗಳನ್ನು ತರುತ್ತಿರುವಾಗ ಘಟನೆ ನಡೆದಿದೆ. ವ್ಯಾನಿನ ಗಾಜನ್ನು ಪುಡಿಗಟ್ಟಿ ಒಂದು ಬಾಕ್ಸ್ ನೋಟುಗಳ ಕಂತೆಯನ್ನು ಎಗರಿಸಲಾಗಿದೆ. ಸೆಕ್ಯುಲರ್ ವ್ಯಾಲಿ ಎಂಬ ಏಜೆನ್ಸಿ ಕಂಪೆನಿಯ ವ್ಯಾನ್ ನಲ್ಲಿ ಈ ದರೋಡೆ ನಡೆದಿದೆ. ಮಾಹಿತಿ ತಿಳಿದು ದೌಡಾಯಿಸಿದ ಪೋಲೀಸರು ವ್ಯಾನ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಸಾಮಾನ್ಯವಾಗಿ ಖಾಸಗೀ ಏಜೆನ್ಸಿಗಳ ಎಟಿಎಂ ವ್ಯವಹಾರ ವ್ಯಾನ್ ಗಳು ತಮ್ಮದೇ ಕೋವಿ ಸಹಿತ ಭದ್ರತಾ ಸಿಬ್ಬಂದಿಗಳೊಂದಿಗೆ ಎಟಿಎಂ ನಿರ್ವಹಿಸುವುದು ವಾಡಿಕೆ. ಆದರೆ ಘಟನೆ ನಡೆದ ವೇಳೆ ಯಾವುದೇ ಭದ್ರತಾ ಸಿಬ್ಬಂದಿಗಳಿದ್ದಿರಲಿಲ್ಲ ಎಂದು ತಿಳಿದುಬಂದಿದೆ.ಪೋಲೀಸರು ತನಿಖೆಯನ್ನು ಊರ್ಜಿತಗೊಳಿಸಿದ್ದು, ಪ್ರಗತಿಯಲ್ಲಿದೆ.