ಭೋಪಾಲ್: ರಾಜ್ಯ ಸೆಕ್ರೆಟ್ರಿಯೇಟ್ ವಲ್ಲಭ್ ಭವನ್-1ರಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 50 ಕ್ಕೂ ಹೆಚ್ಚು ಕಚೇರಿಗಳು ಮತ್ತು ಚೇಂಬರ್ ಗಳು ಭಸ್ಮವಾಗಿವೆ. ಅಗ್ನಿಶಮನಕ್ಕೆ ಸೇನೆಯ ನೆರವು ಬಳಸಿಕೊಳ್ಳಲಾಯಿತು. ಕಳೆದ ಒಂಬತ್ತು ತಿಂಗಳಲ್ಲಿ ಭೋಪಾಲ್‍ನ ಆಡಳಿತ ಸೌಧದಲ್ಲಿ ಸಂಭವಿಸಿದ ಮೂರನೇ ಬೆಂಕಿ ಆಕಸ್ಮಿಕ ಇದಾಗಿದೆ.
ಕಳೆದ ವರ್ಷದ ಜೂನ್ 12ರಂದು ಸಾತ್ಪುರ ಭವನದ ನಾಲ್ಕು ಮಹಡಿಗಳು ಭಸ್ಮವಾಗಿದ್ದವು. ಈ ವರ್ಷದ ಫೆಬ್ರುವರಿ 20ರಂದು ಇದೇ ಕಟ್ಟಡದ ಅವಶೇಷಗಳಿಗೆ ಮತ್ತೆ ಬೆಂಕಿ ಹತ್ತಿಕೊಂಡಿತ್ತು.
ಬೆಳಿಗ್ಗೆ 9.30ರ ಸುಮಾರಿಗೆ ವಲ್ಲಭ್ ಭವನದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸ್ವಲ್ಪವೇ ಸಮಯದಲ್ಲಿ ನಾಲ್ಕು ಮತ್ತು ಐದನೇ ಮಹಡಿಗಳಿಗೆ ಬೆಂಕಿ ಹತ್ತಿಕೊಂಡಿತು. ಐದು ಗಂಟೆಗೂ ಹೆಚ್ಚು ಕಾಲ ಬೆಂಕಿ ಧಗಧಗಿಸುತ್ತಿತ್ತು. ಶನಿವಾರ ರಜಾದಿನವಾದ್ದರಿಂದ ಬೆರಳೆಣಿಕೆಯ ಮಂದಿ ಮಾತ್ರ ಕಟ್ಟಡದಲ್ಲಿದ್ದರು ಹಾಗೂ ಅವರನ್ನು ಸುರಕ್ಷಿತವಾಗಿ ಕರೆ ತರಲಾಯಿತು.
ಐದನೇ ಮಹಡಿ ಸಿಎಂ ಕಾರ್ಯಾಲಯದ ವಿಸ್ತರಣಾ ಶಾಖೆಯಾಗಿದ್ದು, ಇದು ಸಂಪೂರ್ಣ ಭಸ್ಮವಾಗಿದೆ. ಸಿಎಂ ಕಚೇರಿಯ ಆರು ಮಂದಿ ಅಧಿಕಾರಿಗಳು ಮತ್ತು ಇತರ ಕೆಲ ಸಿಬ್ಬಂದಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲ ಚೇಂಬರ್‍ಗಳನ್ನು ಸಚಿವರಿಗೆ ನೀಡಲಾಗಿದೆ. ಕಚೇರಿಯಲ್ಲಿದ್ದ ಕಡತಗಳು, ಪೀಠೋಪಕರಣಗಳು, ವಿದ್ಯುತ್ ಫಿಟ್ಟಿಂಗ್ ಸೇರಿದಂತೆ ಪ್ರತಿಯೊಂದೂ ಭಸ್ಮವಾಗಿದೆ.
ಸುಮಾರು 50 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದವು. ಮಧ್ಯಾಹ್ನದ ವೇಳೆಗೆ ಸೇನೆಯ ನೆರವನ್ನೂ ಪಡೆಯಲಾಯಿತು. ಮಧ್ಯಾಹ್ನ 3.30ರ ವೇಳೆಗೆ ಬೆಂಕಿಯನ್ನು ನಿಯಂತ್ರಿಸಲಾಯಿತು. ಈ ಹಳೆಯ ಕಟ್ಟಡದಲ್ಲಿ ಯಾವುದೇ ಅಗ್ನಿಶಾಮಕ ವ್ಯವಸ್ಥೆ ಇರದಿದ್ದುದು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮತ್ತಷ್ಟು ತೊಡಕಾಯಿತು.
ಘಟನೆ ಬಗ್ಗೆ ತನಿಖೆ ನಡೆಸಲು ಏಳು ಮಂದಿಯ ಸಮಿತಿಯನ್ನು ರಚಿಸಲಾಗಿದೆ. 20 ದಿನಗಳ ಹಿಂದಷ್ಟೇ ಅಗ್ನಿಶಾಮಕ ಅಣಕು ಕಾರ್ಯಾಚರಣೆಯನ್ನು ನಡೆಸಿ, ವಲ್ಲಭ ಭವನದಲ್ಲಿ ವ್ಯವಸ್ಥೆ ಸಮಾಧಾನಕರ ಎಂದು ಹೇಳಲಾಗಿತ್ತು.