ಭೋಪಾಲ್: ಕೇಂದ್ರ ಸರ್ಕಾರದ ಚೀತಾ ಪ್ರಾಜೆಕ್ಟ್ ಅಡಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿರುವ ಐದು ವರ್ಷದ ಚೀತಾ, ಐದು ಮರಿಗಳಿಗೆ ಜನ್ಮ ನೀಡಿರುವ ಸುದ್ದಿಯನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಖಚಿತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ವಾಲು ಕಲಹರಿ ರಿಸರ್ವ್ ಫಾರೆಸ್ಟ್ನಿಂದ ಭಾರತಕ್ಕೆ ಕರೆತರಲಾದ ಗಮಿನಿ ಹೆಸರಿನ 5 ವರ್ಷದ ಹೆಣ್ಣು ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ.
ಎಲ್ಲರಿಗೂ ಅಭಿನಂದನೆಗಳು, ಅದರಲ್ಲೂ ಚಿರತೆಗಳಿಗೆ ಒತ್ತಡ-ಮುಕ್ತ ವಾತಾವರಣವನ್ನು ಖಾತ್ರಿಪಡಿಸಿ, ಮರಿಗಳ ಜನನಕ್ಕೆ ಕಾರಣವಾದ ಅರಣ್ಯಾಧಿಕಾರಿಗಳ ತಂಡ ಮತ್ತು ಅರಣ್ಯ ಸಿಬ್ಬಂದಿಗೆ ವಿಶೇಷ ಅಭಿನಂದನೆಗಳು. ಐದು ಮರಿಗಳ ಜನನದೊಂದಿಗೆ ಕುನೋ ರಾಷ್ಟ್ರೀಯ ಉದ್ಯಾವನದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 26ಕ್ಕೇರಿದೆ. ತನ್ನ ಪ್ರೀತಿಯ ಮರಿಗಳನ್ನು ಪರಿಚಯಿಸುವ ಮೂಲಕ ಗಮಿನಿ ತನ್ನ ಪರಂಪರೆಯನ್ನು ಮುನ್ನಡೆಸಿದೆ ಎಂದು ಯಾದವ್ ತಿಳಿಸಿದ್ದಾರೆ.
ಜನವರಿ 20ರಂದು ಜ್ವಾಲಾ ಹೆಸರಿನ ನಮಿಬೀಯಾ ಚೀತಾ 4 ಮರಿಗಳಿಗೆ ಜನ್ಮ ನೀಡಿತು. ಅದೇ ತಿಂಗಳ ಆರಂಭದಲ್ಲಿ ಆಶಾ ಹೆಸರಿನ ಮತ್ತೊಂದು ನಮಿಬೀಯಾ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿತು. ಜನವರಿ ಒಂದೇ ತಿಂಗಳಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 7 ಚೀತಾ ಮರಿಗಳು ಜನಿಸಿವೆ. ಆದರೆ, ಜನವರಿ 16ರಂದು ಶೌರ್ಯ ಎಂಬ ನಮಿಬೀಯಾ ಚೀತಾ ಕೂಡ ಮರಣ ಹೊಂದಿತು.
ಪ್ರಧಾನಿ ಹುಟ್ಟುಹಬ್ಬದಂದು ಕರೆತರಲಾಯಿತು
2022ರ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. 8ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್ನಿಂದ ವಿಶೇಷವಾಗಿ ಡಿಸೈನ್ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್ನಿಂದ ಚೀತಾಗಳನ್ನು ಕರೆತರಲಾಯಿತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟರು.
ಇಷ್ಟೇ ಅಲ್ಲದೆ, 2023ರ ಫೆಬ್ರವರಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಮತ್ತೆ 12 ಚೀತಾಗಳನ್ನು ಕರೆತರಲಾಯಿತು. 70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.