ನವದೆಹಲಿ: ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತವು ಸಮುದ್ರಯಾನ ಯೋಜನೆಯಡಿ 6 ಕಿ.ಮೀ ಆಳಕ್ಕೆ ವಿಜ್ಞಾನಿಗಳನ್ನು ಕಳುಹಿಸಲು ಸಜ್ಜಾಗಲಿದೆ ಎಂದು ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಆಳಸಮುದ್ರ ಜಲಾಂತರ್ಗಾಮಿ ನೌಕೆ 'ಮತ್ಸ್ಯ6000' ವಿಜ್ಞಾನಿಗಳನ್ನು 6000 ಮೀಟರ್ ಆಳಕ್ಕೆ ಕೊಂಡೊಯ್ಯಲಿದೆ.
'ಈಗ ನಾವು 6000 ಮೀಟರ್ ಆಳಕ್ಕೆ ಹೋಗುವ ಸಮುದ್ರಯಾನದ ಬಗ್ಗೆ ಮಾತನಾಡುತ್ತಿದ್ದೇವೆ. ಸಮುದ್ರದಲ್ಲಿ 6 ಕಿ.ಮೀ ಎಂದರೆ ಅದು ಬೆಳಕು ಸಹ ಪ್ರವೇಶಿಸದ ಪ್ರದೇಶವಾಗಿದೆ. ಜನರನ್ನು ಸಮುದ್ರದಾಳಕ್ಕೆ ಕೊಂಡೊಯ್ಯುವ ನೌಕೆ ಮತ್ಸ್ಯ6000 ತಯಾರಿಯಲ್ಲಿದೆ' ಎಂದು ರಿಜಿಜು ಹೇಳಿದ್ದಾರೆ.
ಯೋಜನೆ ಬಗ್ಗೆ ನಾನು ಪರಿಶೀಲನೆ ನಡೆಸಿದ್ದೇನೆ. ಈ ವರ್ಷಾಂತ್ಯಕ್ಕೆ ಕಡಿಮೆ ಆಳದ ನೀರಿನಲ್ಲಿ ವಿಜ್ಞಾನಿಗಳು ನೌಕೆಯ ಪರೀಕ್ಷೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
'2025ರ ಅಂತ್ಯದ ವೇಳೆಗೆ ನಾವು ಮನುಷ್ಯರನ್ನು ಆಳ ಸಮುದ್ರಕ್ಕೆ, ಅಂದರೆ, 6,000 ಮೀಟರ್‌ಗಿಂತಲೂ ಹೆಚ್ಚು ಆಳಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ' ಎಂದು ಅವರು ಹೇಳಿದ್ಧಾರೆ.
ಸಮುದ್ರಯಾನ ಅಥವಾ ಆಳ ಸಮುದ್ರ ಯಾನ 2021ರಲ್ಲೇ ಆರಂಭವಾಗಿದ್ದು, ಇದೀಗ, ಪ್ರಯಾಣ ಆರಂಭದ ಹಂತಕ್ಕೆ ಬಂದಿದೆ.
ಸಬ್‌ಮರ್ಸಿಬಲ್ ನೌಕೆಯಲ್ಲಿ ಮೂವರು ಪ್ರಯಾಣ ಬೆಳೆಸಲು ಅವಕಾಶವಿದ್ದು, ವೈಜ್ಞಾನಿಕ ಸೆನ್ಸಾರ್‌ಗಳು, ಇತರೆ ಟೂಲ್‌ಗಳು ಇರಲಿವೆ. ಒಮ್ಮೆ ನೀರಿಗಿಳಿದರೆ, 12 ಗಂಟೆ ಕಾರ್ಯಾಚರಣೆ ನಡೆಸಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ 96 ಗಂಟೆವರೆಗೆ ನೀರಿನಲ್ಲಿ ಉಳಿಯಬಹುದಾಗಿದೆ.
ಈ ಅಮೆರಿಕ, ರಷ್ಯಾ, ಫ್ರಾನ್ಸ್, ಮತ್ತು ಜಪಾನ್ ದೇಶಗಳು ಆಳ ಸಮುದ್ರಯಾನವನ್ನು ಯಶ್ವಯಾಗಿ ನಡೆಸಿವೆ.