ನವದೆಹಲಿ: ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಪಿಂಕಿ ಆನಂದ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆಯುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಒತ್ತಡ ತಂತ್ರಗಳನ್ನು ಬಳಸುತ್ತಿವೆ. ವಿಶೇಷವಾಗಿ ರಾಜಕೀಯ ನಾಯಕರು ಮತ್ತು ಭ್ರಷ್ಟಾಚಾರ ಆರೋಪಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಈ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ವಕೀಲರು ಆರೋಪ ಮಾಡಿದ್ದಾರೆ.
ಈ ರೀತಿಯ ನಡವಳಿಕೆ ಪ್ರಜಾಪ್ರಭುತ್ವದ ಚೌಕಟ್ಟು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಗಮನಾರ್ಹ ಅಪಾಯವನ್ನು ಉಂಟಮಾಡುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುತ್ತಿವೆ. ನ್ಯಾಯಾಲಯದ ಪ್ರಸ್ತುತ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸುವ ಮತ್ತು ನ್ಯಾಯಾಲಯಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುವ ನಿರಂತರ ಪ್ರಯತ್ನದಲ್ಲಿದ್ದಾರೆ ಎಂದು ವಕೀಲರು ಆರೋಪ ಮಾಡಿದ್ದಾರೆ.
ಈ ಪಟ್ಟಭದ್ರ ಹಿತಾಸಕ್ತಿ ನೇಮಕ ಮಾಡಿಕೊಂಡಿರುವ ಗುಂಪುಗಳು ಅವರವರ ರಾಜಕೀಯ ಕಾರ್ಯಸೂಚಿಯ ಆಧಾರದ ಮೇಲೆ ನ್ಯಾಯಾಲಯದ ತೀರ್ಪುಗಳನ್ನು ಟೀಕಿಸುವುದು ಅಥವಾ ಪ್ರಶಂಸಿಸುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿವೆ. ಅದರಲ್ಲೂ ಕೆಲವು ವಕೀಲರು ಹಗಲಿರುಳು ರಾಜಕಾರಣಿಗಳನ್ನು ರಕ್ಷಿಸುವುದು ಮತ್ತು ರಾತ್ರಿಯಲ್ಲಿ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದನ್ನು ನೋಡಲು ನಿಜಕ್ಕೂ ಬೇಸರವಾಗುತ್ತಿದೆ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜಕಾರಣಿಗಳು ಯಾರೋ ಒಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವುದು ತುಂಬಾ ವಿಚಿತ್ರವಾಗಿದೆ. ನ್ಯಾಯಾಲಯದ ತೀರ್ಪು ಇಷ್ಟವಾಗದಿದ್ದರೆ ನ್ಯಾಯಾಲಯವನ್ನೇ ಮಾಧ್ಯಮಗಳ ಮೂಲಕ ಟೀಕಿಸುತ್ತಾರೆ ಎಂದು ವಕೀಲರ ಗುಂಪು ಹೇಳಿದರ.
2024ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂದು ಒತ್ತಿ ಹೇಳಿರುವ ವಕೀಲರ ಗುಂಪು, ಕೆಲವರು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಪ್ರಕರಣಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ತೀರ್ಪು ನೀಡುವಂತೆ ನ್ಯಾಯಾಧೀಶರ ಮೇಲೆ ಒತ್ತಡ ಹೇರಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡುತ್ತಿವೆ ಎಂದು ಆರೋಪಿಸಿದೆ.
ತಮ್ಮ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳನ್ನು ಕೀಳಾಗಿ ಮಾಡುವ ಯಾವುದೇ ಪ್ರಯತ್ನಗಳನ್ನು ಯಾವುದೇ ಸಂದರ್ಭದಲ್ಲೂ ಒಪ್ಪುವುದಿಲ್ಲ. ಈ ದಾಳಿಗಳಿಂದ ನಮ್ಮ ನ್ಯಾಯಾಲಯಗಳನ್ನು ರಕ್ಷಿಸಲು ಮತ್ತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಲವಾಗಿ ನಿಲ್ಲಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸುಪ್ರೀಂ ಕೋರ್ಟ್‌ಗೆ ವಿನಂತಿಸುತ್ತೇವೆ ಎಂದು ವಕೀಲರು ಪತ್ರದಲ್ಲಿ ತಿಳಿಸಿದ್ದಾರೆ.