ಮಾಸ್ಕೊ: ಉಗ್ರರ ದಾಳಿಗೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಕ್ತದೋಕುಳಿಯೇ ಹರಿದಿದೆ.
ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್‌ಗೆ (Crocus City Hall) ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ಗುಂಡಿನ ದಾಳಿಯಿಂದ 60 ಜನ ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದೆ.
ಕ್ರಾಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ಸಂಗೀತ ಕಛೇರಿ ನಡೆಯುತ್ತಿತ್ತು. ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಈ ವೇಳೆ ಏಕಾಏಕಿ ಹಾಲ್ ಒಳಗೆ ನುಗ್ಗಿದ ಉಗ್ರರು ಮನಸೋಇಚ್ಚೆ ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯ ಜೊತೆಗೆ ಉಗ್ರರು ಸಭಾಗಂಣಕ್ಕೆ ಬೆಂಕಿಯನ್ನೂ ಹಚ್ಚಿದ್ದು ಸಭಾಂಗಣ ಹೊತ್ತಿ ಉರಿದಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಕೆಲ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿದೆ ಎಂದು ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ರಷ್ಯಾದಲ್ಲಿನ ನಡೆದ ದೊಡ್ಡ ದಾಳಿ ಇದಾಗಿದೆ.
ಕ್ರಾಕಸ್ ಸಿಟಿ ಹಾಲ್ ಸುಮಾರು 6 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಭಾಂಗಣವಾಗಿದೆ.
ಇತ್ತೀಚೆಗಷ್ಟೇ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾದ ಬೆನ್ನಲ್ಲೇ ರಷ್ಯಾದ ಮೇಲೆ ದೊಡ್ಡ ದಾಳಿ ನಡೆದಿದೆ.