ನವದೆಹಲಿ: ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಮುನ್ಸೂಚನೆಯನ್ನು ರೇಟಿಂಗ್ ಏಜೆನ್ಸಿ ಮೂಡೀಸ್ ಸೋಮವಾರ (ಮಾರ್ಚ್ 04) ಹೆಚ್ಚಿಸಿದೆ.
ಭಾರತದ ಆರ್ಥಿಕತೆಯು 2023ರಲ್ಲಿ ನಿರೀಕ್ಷಿತ ಅಂಕಿ-ಅಂಶಗಳಿಗಿಂತ ಉತ್ತಮ ಮತ್ತು ಪ್ರಬಲವಾಗಿದ್ದು, ಇದು 2024ರ ಜಿಡಿಪಿ ಬೆಳವಣಿಗೆ ದರ ಅಂದಾಜನ್ನು 6.1% ರಿಂದ 6.8% ಕ್ಕೆ ಹೆಚ್ಚಿಸಲು ಕಾರಣವಾಗಿದೆ ಎಂದು ರೇಟಿಂಗ್ ಏಜೆನ್ಸಿ ಮೂಡೀಸ್, ತನ್ನ ಗ್ಲೋಬಲ್ ಮ್ಯಾಕ್ರೋ ಔಟ್‌ಲುಕ್ 2024ರಲ್ಲಿ ತಿಳಿಸಿದೆ.
ಮೂಡೀಸ್ ಮುನ್ಸೂಚನೆ ಪ್ರಕಾರ ಭಾರತವು G-20 ದೇಶಗಳ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಭಾರತದ ಆರ್ಥಿಕತೆಯು ಡಿಸೆಂಬರ್ ತ್ರೈಮಾಸಿಕದಲ್ಲಿ ( ಹಣಕಾಸು ವರ್ಷ 20224ರ ಮೂರನೇ ತ್ರೈಮಾಸಿಕದಲ್ಲಿ) 8.4% ರಷ್ಟು ಆಶ್ಚರ್ಯಕರ ಬೆಳವಣಿಗೆಯೊಂದಿಗೆ ಮೇಲಕ್ಕೇರಿದ್ದು, ಉತ್ಪಾದನೆ, ವಿದ್ಯುತ್ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಕುಸಿತದ ಭಯವನ್ನು ಸುಳ್ಳು ಮಾಡಿದೆ ಎಂದಿದೆ.
ಕೇಂದ್ರದ ಅಂಕಿಅಂಶಗಳ ಸಚಿವಾಲಯವು ಕೂಡ ತನ್ನ ಎರಡನೇ ಪರಿಷ್ಕೃತ ಅಂದಾಜಿನಲ್ಲಿ ಹಣಕಾಸು ವರ್ಷ 2024ಕ್ಕೆ ಜಿಡಿಪಿ ಬೆಳವಣಿಗೆಯ ಅಂದಾಜನ್ನು 7.3 ರಿಂದ 7.6% ಕ್ಕೆ ಏರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿನ ಪ್ರಕಾರ ಜಿಡಿಪಿ ಬೆಳವಣಿಗೆ ದರ 7 ರಷ್ಟಿದ್ದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಜಿಡಿಪಿ ದರ ಮುನ್ಸೂಚನೆಯನ್ನು 6.7 ರಷ್ಟು ಎಂದು ಅಂದಾಜಿಸಿದೆ.
ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶಗಳೇ ಆರ್ಥಿಕ ಬಿಕ್ಕಟ್ಟುಗೆ ಸಿಲುಕಿರುವಾಗ, ಭಾರತದ ಆರ್ಥಿಕತೆಯು ಶೇ. 6.0% ರಿಂದ 7 ರಷ್ಟು ನೈಜ ಜಿಡಿಪಿ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಂಬುತ್ತೇವೆ. ಹೀಗಾಗಿ 2024 ರ ಕ್ಯಾಲೆಂಡರ್ ವರ್ಷದಲ್ಲಿ ಶೇ.6.8 ರಷ್ಟು ಹಾಗೂ 2025ರಲ್ಲಿ ಶೇ. 6.4 ರಷ್ಟು ಭಾರತದ ಜಿಡಿಪಿ ಬೆಳವಣಿಗೆ ದರವನ್ನು ನಿರೀಕ್ಷಿಸುತ್ತೇವೆ ಎಂದು ಮೂಡೀಸ್ ಹೇಳಿದೆ.
ಸರ್ಕಾರದ ಬಂಡವಾಳ ವೆಚ್ಚ ಮತ್ತು ಬಲವಾದ ಉತ್ಪಾದನಾ ಚಟುವಟಿಕೆಯು 2023 ರಲ್ಲಿ ದೃಢವಾದ ಬೆಳವಣಿಗೆಯ ಫಲಿತಾಂಶಗಳಿಗೆ ಕೊಡುಗೆ ನೀಡಿದೆ. ಸಾರ್ವತ್ರಿಕ ಚುನಾವಣೆಯ ನಂತರವೂ ಇದೇ ನೀತಿಗಳು ಮುಂದುವರಿಯುವುದನ್ನು ಮತ್ತು ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಮೂಡೀಸ್ ತಿಳಿಸಿದೆ.