ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿಯ 7 ಶಾಸಕರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿಯ 7 ಶಾಸಕರನ್ನು ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ಮೋಹನ್ ಸಿಂಗ್ ಬಿಷ್ಟ್, ಅಜಯ್ ಮಹಾವರ್, ಒ.ಪಿ.ಶರ್ಮಾ, ಅಭಯ್ ವರ್ಮಾ, ಅನಿಲ್ ಬಜಪಾಲ್, ಜಿತೇಂದರ್ ಮಹಾಜನ್ ಮತ್ತು ವಿಜೇಂದರ್ ಗುಪ್ತಾ ಅಮಾನತುಗೊಂಡಿದ್ದ ಶಾಸಕರು. ಹಕ್ಕುಬಾದ್ಯತಾ ಸಮಿತಿಯಲ್ಲಿ ತಮ್ಮ ವಿರುದ್ಧದ ಆರೋಪದ ಬಗ್ಗೆ ನಿರ್ಧಾರ ಹೊರಬೀಳುವವರೆಗೂ ತಮ್ಮ ಅಮಾನತು ಆದೇಶವನ್ನು ವಜಾ ಮಾಡುವಂತೆ ಶಾಸಕರು ಕೋರಿದ್ದರು.
'ರಿಟ್ ಅರ್ಜಿಯನ್ನು ಪುರಸ್ಕರಿಸಲಾಗಿದೆ'ಎಂದು ಎಂದು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಆದೇಶದ ವೇಳೆ ಹೇಳಿದ್ದಾರೆ.
ತಮ್ಮ ಮೇಲಿನ ಆರೋಪದ ವಿಚಾರಣೆ ಬಾಕಿ ಇರುವಾಗಲೇ ಅಮಾನತುಗೊಳಿಸಿರುವ ಆದೇಶ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಶಾಸಕರು ವಾದಿಸಿದ್ದರು. ವಿರೋಧ ಪಕ್ಷದ ಧ್ವನಿ ನಿಗ್ರಹಿಸಲು ಈ ಅಮಾನತು ಮಾಡಿಲ್ಲ. ಬದಲಾಗಿ, ಅವರು ತೋರಿದ ಗಂಭೀರ ದುರ್ವರ್ತನೆಯಿಂದಾಗಿ ಈ ಆದೇಶ ಮಾಡಲಾಗಿದೆ ಎಂಬುದಾಗಿ ವಿಧಾನಸಭೆಯ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಫೆಬ್ರುವರಿ 15ರಂದು ಲೆಫ್ಟಿನೆಂಟ್ ಗವರ್ನರ್ ತಮ್ಮ ಭಾಷಣದಲ್ಲಿ ಎಎಪಿ ಸರ್ಕಾರದ ಸಾಧನೆಗಳನ್ನು ಹೇಳುತ್ತಿದ್ದಾಗ ಹಲವು ಬಾರಿ ಬಿಜೆಪಿ ಮುಖಂಡರು ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದರು.
ಈ ಸಂದರ್ಭ, ಅನುಚಿತ ವರ್ತನೆ ತೋರಿದ ಬಿಜೆಪಿ ಶಾಸಕರ ಅಮಾನತಿಗೆ ಎಎಪಿ ಶಾಸಕ ದಿಲೀಪ್ ಪಾಂಡೆ ನಿರ್ಣಯ ಮಂಡಿಸಿದ್ದರು. ಸ್ಪೀಕರ್ ರಾಮ್ ನಿವಾಸ್ ಗೋಯಲ್ ನಿರ್ಣಯವನ್ನು ಅಂಗೀಕರಿಸಿದರು. ಜೊತೆಗೆ, ಹಕ್ಕುಬಾದ್ಯತಾ ಸಮಿತಿಗೆ ವಿಚಾರಣೆಗೆ ಶಿಫಾರಸು ಮಾಡಿದ್ದರು.
ವಿಪಕ್ಷ ನಾಯಕ ರಾಮವೀರ್ ಸಿಂಗ್ ಅವರನ್ನು ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿತ್ತು.
ಬಜೆಟ್‌ಗೆ ಅನುಮೋದನೆ ಪಡೆಯಲು ವಿಳಂಬವಾದ್ದರಿಂದ ಸದನದ ಕಲಾಪವನ್ನು ಮಾರ್ಚ್ ಮೊದಲ ವಾರದವರೆಗೆ ವಿಸ್ತರಿಸಲಾಗಿತ್ತು.