ನವದೆಹಲಿ: ಲೋಕಸಭೆ, ನಾಲ್ಕು ರಾಜ್ಯಗಳ ವಿಧಾನಸಭೆ ಮತ್ತು ವಿವಿಧ ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸಿದೆ. ದೇಶದಲ್ಲಿ ಏಳು ಹಂತಗಳಲ್ಲಿ ಹಾಗೂ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ವೇಳಾಪಟ್ಟಿ ಪ್ರಕಟಿಸಿದರು.
ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಆಗಲಿದೆ ಎಂದರು. ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ ಜರುಗಲಿದೆ. ಈ ಚುನಾವಣೆಯಲ್ಲಿ 97 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರು ಎಂದರು.
ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೆ ಏಪ್ರಿಲ್ 19ರಂದು, ಆಂಧ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಹಾಗೂ ಒಡಿಶಾ ವಿಧಾನಸಭೆಗೆ ನಾಲ್ಕು ಹಂತಗಳಲ್ಲಿ (ಮೇ 13, ಮೇ 20, ಮೇ 25 ಹಾಗೂ ಜೂನ್ 1) ಮತದಾನ ನಡೆಯಲಿದೆ.
ರಾಜಕೀಯ ಪಕ್ಷಗಳು ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದ ರಾಜೀವ್ ಕುಮಾರ್, ತಾರಾ ಪ್ರಚಾರಕರು ಸೇರಿದಂತೆ ಅಭ್ಯರ್ಥಿಯ ಪರ ಪ್ರಚಾರ ಮಾಡುವ ಎಲ್ಲರೂ ಸಭ್ಯತೆಯ ಎಲ್ಲೆ ಮೀರಬಾರದು ಎಂದರು. ವೈಯಕ್ತಿಕ ನಿಂದನೆಗಳಿಂದ ದೂರವಿರಬೇಕೆಂದು ನಾನು ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಅವರು ಸೂಚಿಸಿದರು. 85 ವರ್ಷ ದಾಟಿದ ವೃದ್ಧರು ಹಾಗೂ ನಿಗದಿತ ಮಿತಿಯಂತೆ ಶೇ 40ರಷ್ಟು ಅಂಗವಿಕಲತೆ ಹೊಂದಿರುವವರು ಮನೆಯಿಂದಲೇ ಮತ ಚಲಾಯಿಸಬಹುದು. ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರ ನೀಡಿದರು. ಸೂರ್ಯಾಸ್ತದ ನಂತರ ಬ್ಯಾಂಕ್ ವಾಹನಗಳಲ್ಲಿ ನಗದು ಸಾಗಣೆಗೆ ಅವಕಾಶ ಇಲ್ಲ ಎಂದು ಅವರು ಹೇಳಿದರು. ಪ್ರತಿ ಅಭ್ಯರ್ಥಿ ಗರಿಷ್ಠ ₹80 ಲಕ್ಷ ಚುನಾವಣಾ ವೆಚ್ಚ ಮಾಡಬಹುದು ಎಂದರು.
ತೋಳ್ಬಲ, ಹಣದ ಶಕ್ತಿ, ಸುಳ್ಳು ಹಾಗೂ ತಪ್ಪು ಮಾಹಿತಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಸವಾಲುಗಳನ್ನು ಎದುರಿಸಲು ಚುನಾವಣಾ ಆಯೋಗ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.
ಮತದಾರರಲ್ಲಿ ಲಿಂಗ ಅನುಪಾತವು 948 ಕ್ಕೆ ಏರಿಕೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ 12 ರಾಜ್ಯಗಳಿವೆ ಎಂದು ಅವರು ಹೇಳಿದರು.
ಆಯೋಗವು 17 ಲೋಕಸಭಾ ಚುನಾವಣೆಗಳು, 16 ರಾಷ್ಟ್ರಪತಿ ಚುನಾವಣೆಗಳು ಮತ್ತು 400ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳನ್ನು ನಡೆಸಿದೆ ಎಂದು ಕುಮಾರ್ ಹೇಳಿದರು.
ಚುನಾವಣಾ ವೇಳಾಪಟ್ಟಿ
ಪ್ರಕ್ರಿಯೆ; ರಾಜ್ಯದಲ್ಲಿ ಮೊದಲನೇ ಹಂತ; ಎರಡನೇ ಹಂತ
ಅಧಿಸೂಚನೆ; ಮಾರ್ಚ್ 28; ಏಪ್ರಿಲ್ 12
ನಾಮಪತ್ರ ಸಲ್ಲಿಸಲು ಕೊನೆ ದಿನ; ಏಪ್ರಿಲ್ 4; ಏಪ್ರಿಲ್ 19
ನಾಮಪತ್ರ ಪರಿಶೀಲನೆ; ಏಪ್ರಿಲ್ 5; ಏಪ್ರಿಲ್ 20
ನಾಮಪತ್ರ ವಾಪಸ್‌ಗೆ ಕೊನೆ ದಿನ; ಏಪ್ರಿಲ್ 8; ಏಪ್ರಿಲ್ 22
ಮತದಾನ; ಏಪ್ರಿಲ್ 26; ಮೇ 7
ಮೇ 7ರಂದು ಸುರಪುರ ಉಪಚುನಾವಣೆ
ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಮೇ 7ರಂದು ನಡೆಯಲಿದೆ. ಜತೆಗೆ, ಹಿಮಾಚಲ ಪ್ರದೇಶದ ಅನರ್ಹ ಆರು ಶಾಸಕರ ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 25 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಕಾಂಗ್ರೆಸ್‌ನ ಹಾಲಿ ಶಾಸಕ ಕಾಂಗ್ರೆಸ್ ರಾಜಾ ವೆಂಕಟಪ್ಪ ನಾಯ್ಕ್ ಅವರು ಇತ್ತೀಚೆಗೆ ನಿಧನರಾಗಿದ್ದರು.
'ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ'
ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಭದ್ರತಾ ಕಾರಣಗಳಿಂದಾಗಿ ಲೋಕಸಭೆಯೊಂದಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.
'ಲೋಕಸಭಾ ಚುನಾವಣೆಯ ಸಿದ್ಧತೆ ಪರಿಶೀಲಿಸಲು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದೆವು. ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ರಾಜಕೀಯ ಪಕ್ಷಗಳು ಮನವಿ ಸಲ್ಲಿಸಿದ್ದವು. ನಾವು ಅದನ್ನು ಗೌರವಿಸುತ್ತೇವೆ. ಆದರೆ, ಇಡೀ ಆಡಳಿತಯಂತ್ರವು ಈ ಪರಿಕಲ್ಪನೆಗೆ ವಿರುದ್ಧವಾಗಿತ್ತು. ಚುನಾವಣಾ ಸಂದರ್ಭದಲ್ಲಿ ಭದ್ರತಾ ಪಡೆಗಳನ್ನು ದೊಡ್ಡ ಮಟ್ಟದಲ್ಲಿ ನಿಯೋಜನೆ ಮಾಡಬೇಕಾಗು ತ್ತದೆ. ದೇಶದಾದ್ಯಂತ ಚುನಾವಣೆ ನಡೆಯುವ ಸಂದರ್ಭದಲ್ಲಿ ಇದು ಕಾರ್ಯಸಾಧುವಲ್ಲ' ಎಂದು ಅವರು ಹೇಳಿದರು.
ಆಯೋಗದಲ್ಲಿ ಭಿನ್ನಾಭಿಪ್ರಾಯ ಸಹಜ: ರಾಜೀವ್
ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ರಾಜೀನಾಮೆ ಕುರಿತ ಪ್ರಶ್ನೆಗೆ ರಾಜೀವ್ ಕುಮಾರ್ ನೇರ ಉತ್ತರ ನೀಡಲಿಲ್ಲ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಅರುಣ್ ಅವರು ನಮ್ಮ ತಂಡದ ಅತ್ಯಂತ ಗೌರವಾನ್ವಿತ ಸದಸ್ಯರಾಗಿದ್ದರು' ಎಂದು ಬಣ್ಣಿಸಿದರು. 'ಭಾರತೀಯ ಚುನಾವಣಾ ಆಯೋಗದಲ್ಲಿ ಯಾವಾಗಲೂ ಭಿನ್ನಾಭಿಪ್ರಾಯಗಳಿರುತ್ತವೆ' ಎಂದೂ ಅವರು ಹೇಳಿದರು.
'ನಮ್ಮಲ್ಲಿ ಒಂದು ಉತ್ತಮ ಪದ್ಧತಿಯಿದೆ. ಆಯೋಗದೊಳಗಿನ ಭಿನ್ನಾಭಿಪ್ರಾಯಗಳನ್ನು ನಾವು ಉತ್ತೇಜಿಸುತ್ತೇವೆ. ಇದು ಕಠಿಣ ಕೆಲಸವಾದ್ದರಿಂದ ಒಬ್ಬರಿಗಿಂತ ಮೂರು ಮನಸ್ಸುಗಳು ಉತ್ತಮ. ನಾವು ವಿಚಾರ ಮಂಥನ ಮಾಡುತ್ತೇವೆ. ನಾವು ವಿಶ್ಲೇಷಿಸುತ್ತೇವೆ' ಎಂದರು.
'ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸಿದ್ದೇನೆ. ಆದರೆ, ಪ್ರತಿ ಸಂಸ್ಥೆಯಲ್ಲೂ ಪ್ರತಿಯೊಬ್ಬರಿಗೂ ವೈಯಕ್ತಿಕ ಜಾಗವನ್ನು ನೀಡಬೇಕು ಮತ್ತು ಸಂವೇದನಾರಹಿತವಾದ ವೈಯಕ್ತಿಕ ಪ್ರಶ್ನೆಗಳನ್ನು ಕೇಳಬಾರದು' ಎಂದರು. ವೈಯಕ್ತಿಕ ಕಾರಣದಿಂದ ಅವರು ರಾಜೀನಾಮೆ ನೀಡಿದ್ದರೆ ಅದನ್ನು ನಾವು ಗೌರವಿಸಬೇಕು ಎಂದರು.
ಕುಮಾರ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. 2027ರ ಡಿಸೆಂಬರ್ ವರೆಗೆ ಅಧಿಕಾರಾವಧಿ ಹೊಂದಿದ್ದ ಗೋಯಲ್ ಅವರು ಕಳೆದ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಶಿಬಿರದಿಂದ ಮತ ಚಲಾಯಿಸಲು ಅವಕಾಶ
ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಎರಡು ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ, ಒಂದು ಲೋಕಸಭಾ ಕ್ಷೇತ್ರದಲ್ಲಿ ಎರಡು ದಿನಗಳಲ್ಲಿ ಮತದಾನ ನಡೆಯಲಿದೆ.
ಜತೆಗೆ, ಇಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿರುವ ಜನರಿಗೆ ತಮ್ಮ ಶಿಬಿರಗಳಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.
ಇವಿಎಂ ಟೀಕೆಗೆ ವ್ಯಂಗ್ಯದ ಉತ್ತರ: ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯಲ್ಲಿ ಲೋಪ ಇದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ನ್ಯಾಯಾಲಯವು 40 ಬಾರಿ ಇವಿಎಂಗಳ ಕುರಿತ ವಿವಿಧ ದೂರುಗಳನ್ನು ಪರಿಶೀಲಿಸಿದೆ ಮತ್ತು ಎಲ್ಲವನ್ನೂ ವಜಾಗೊಳಿಸಿದೆ. ಇವಿಎಂಗಳು ಮತದಾನವನ್ನು ನ್ಯಾಯಯುತ ಮತ್ತು ಉತ್ತಮವಾಗಿಸಿದೆ ಎಂಬುದನ್ನು ಎಲ್ಲ ಪಕ್ಷಗಳು ಮನಸ್ಸಿನಲ್ಲೇ ಒಪ್ಪಿಕೊಂಡಿವೆ. ಅದೇ ಇವಿಎಂಗಳ ಬಳಕೆಯಿಂದ ಆಡಳಿತ ಪಕ್ಷಗಳು ಕೂಡ ಅಧಿಕಾರ ಕಳೆದುಕೊಂಡಿವೆ. ಇವಿಎಂ ತಿರುಚಲು ಸಾಧ್ಯವಿಲ್ಲ' ಎಂದರು. ಕವನವೊಂದನ್ನು ವಾಚಿಸಿ ಇವಿಎಂಗಳ ಟೀಕಾಕಾರರನ್ನು ಚುಚ್ಚಿದರು.
ದೇಣಿಗೆಗಳ ಮೇಲೆ ನಿಗಾ ಅಗತ್ಯ
ಚುನಾವಣಾ ಬಾಂಡ್‌ಗಳ ಸುತ್ತ ಎದ್ದಿರುವ ಇತ್ತೀಚಿನ ವಿವಾದಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಕುಮಾರ್, 'ದಾನಿಗಳ ಗೋಪ್ಯತೆಯನ್ನು ಕಾಪಾಡುವ ಜೊತೆಗೆ, ಲೆಕ್ಕಕ್ಕೆ ಸಿಗದ ರಾಜಕೀಯ ದೇಣಿಗೆಗಳ ಮೇಲೆ ನಿಗಾ ವಹಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿದರು.
'ಆಯೋಗವೂ ಯಾವಾಗಲೂ ಪಾರದರ್ಶಕತೆಗೆ ಒತ್ತು ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ವಿಷಯಗಳನ್ನು ಗೋಪ್ಯವಾಗಿರಿಸಲು ಅವಕಾಶವಿಲ್ಲ. ನಾವೆಲ್ಲರೂ ಪಾರದರ್ಶಕತೆಗಾಗಿ ಶ್ರಮಿಸುತ್ತಿದ್ದೇವೆ. ದೇಶದ ಜನರು ಈಗ ಸೂಕ್ತ ವೇದಿಕೆಗಳ ಮೂಲಕ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೊಳ್ಳಬಹುದು' ಎಂದರು.
'ಚುನಾವಣೆಯ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ ಹಣದ ಬಳಕೆಗೆ ಕಡಿವಾಣ ಹಾಕಲು ನಾವು
ಆದ್ಯತೆ ನೀಡುತ್ತಿದ್ದೇವೆ. ಆದರೆ, ಲೆಕ್ಕಕ್ಕೆ ಸಿಗದ ದೇಣಿಗೆಯನ್ನು ತಡೆಯುವುದು ಹೇಗೆ ಎಂಬು
ದರ ಕುರಿತು ಇಡೀ ದೇಶದ ಜನರು ಒಟ್ಟಾಗಿ ಕೆಲಸ ಮಾಡಬೇಕಿದೆ' ಎಂದು ಅವರು ಅಭಿಪ್ರಾಯಪಟ್ಟರು.