ನವದೆಹಲಿ: ಚುನಾವಣಾ ಬಾಂಡ್ ಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವ ಸಂದರ್ಭದಲ್ಲೇ ಈ ಬಾಂಡ್ ಗಳಿಂದ ರಾಜಕೀಯ ಪಕ್ಷಗಳಿಗೆ ಬಂದಿರುವ ಆದಾಯದ ಕುರಿತು ಕುತೂಹಲಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. 2022-23 ರ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ಅಜ್ಞಾತ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಬಂದ ಶೇ.82 ರಷ್ಟು ಆದಾಯ ಚುನಾವಣಾ ಬಾಂಡ್‌ಗಳದ್ದಾಗಿದೆ ಎಂಬ ಮಾಹಿತಿಯನ್ನು ಎನ್ ಜಿಒ ಎಡಿಆರ್ ಬಹಿರಂಗಗೊಳಿಸಿದೆ.
ರಾಷ್ಟ್ರೀಯ ಪಕ್ಷಗಳ ಆಡಿಟ್ ವರದಿಗಳ ವಿಶ್ಲೇಷಣೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ಹೇಳಿಕೆಗಳ ಪ್ರಕಾರ, ರಾಜಕೀಯ ಪಕ್ಷಗಳ ಆದಾಯದ ಬಹುಪಾಲು ಮೂಲಗಳು ಈಗಲೂ ಅಜ್ಞಾತವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ.
2022-23 ರ ಅವಧಿಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲ್ಪಟ್ಟ ಮಾಹಿತಿಯ ಪ್ರಕಾರ, ಅಜ್ಞಾತ ಮೂಲಗಳಿಂದ ಬಂದ ಆದಾಯದ 1,832.88 ಕೋಟಿ ರೂ.ಗಳಲ್ಲಿ ಚುನಾವಣಾ ಬಾಂಡ್‌ಗಳ ಆದಾಯದ ಪಾಲು ರೂ. 1,510 ಕೋಟಿ ಅಥವಾ ಶೇ. 82.42 ರಷ್ಟಿದೆ ಎಂದು ಎಡಿಆರ್ ಹೇಳಿದೆ.
ಈ ಅಧ್ಯಯನಕ್ಕಾಗಿ, ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ-ಎಂ) ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಆಮ್ ಆದ್ಮಿ ಪಕ್ಷ (ಎಎಪಿ). ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಗಳನ್ನು ಪರಿಗಣಿಸಲಾಗಿದೆ.
ಬಿಜೆಪಿಯು ರಾಷ್ಟ್ರೀಯ ಪಕ್ಷಗಳ ಪೈಕಿ ಅಜ್ಞಾತ ಮೂಲಗಳಿಂದ 1,400 ಕೋಟಿ ರೂಪಾಯಿ ಅಥವಾ ಒಟ್ಟು ಮೊತ್ತದ ಶೇಕಡಾ 76.39 ರಷ್ಟು ಆದಾಯವನ್ನು ಘೋಷಿಸಿದೆ. ಕಾಂಗ್ರೆಸ್ 315.11 ಕೋಟಿ (ಶೇ. 17.19) ಮೊತ್ತವನ್ನು ಘೋಷಿಸಿದೆ.
20,000ಕ್ಕಿಂತ ಮೇಲ್ಪಟ್ಟು ಅಥವಾ ಕಡಿಮೆ, ಕೂಪನ್‌ಗಳು ಅಥವಾ ಚುನಾವಣಾ ಬಾಂಡ್‌ಗಳ ಮಾರಾಟ ಅಥವಾ ಆದಾಯದ ಅಜ್ಞಾತ ಮೂಲಗಳಿಂದ ಸ್ವಯಂಪ್ರೇರಿತ ಕೊಡುಗೆಗಳಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂದು ಬಿಎಸ್‌ಪಿ ಘೋಷಿಸಿದೆ ಎಂದು ಎಡಿಆರ್ ಹೇಳಿದೆ. ರಾಷ್ಟ್ರೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳಿಂದ ದೇಣಿಗೆಯ ಮೊತ್ತವನ್ನು ಹೈಲೈಟ್ ಮಾಡಲಾಗಿದೆಯಾದರೂ, ರಾಜ್ಯ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಗಣನೀಯ ಪ್ರಮಾಣದ ಹಣವನ್ನು ಪಡೆಯುತ್ತವೆ ಎಂಬುದನ್ನು ಎನ್‌ಜಿಒ ಗಮನಿಸಿದೆ.
2004-05 ಮತ್ತು 2022-23 ರ ಆರ್ಥಿಕ ವರ್ಷಗಳ ನಡುವೆ ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ 19,083 ಕೋಟಿ ರೂ.ಗಳನ್ನು ಸಂಗ್ರಹಿಸಿವೆ ಎಂದು ಎಡಿಆರ್ ಹೇಳಿದೆ.